ಅತಿ ವಿಳಂಬಿತ ಪ್ರಕರಣಗಳಲ್ಲಿ ಮಾತ್ರ ತನಿಖೆಗೆ ಗಡುವು ವಿಧಿಸಬೇಕು: ಸುಪ್ರೀಂ ಕೋರ್ಟ್

ತನಿಖೆಗೆ ಗಡುವು ವಿಧಿಸುವುದು ಸಾಮಾನ್ಯ ಕ್ರಮವಾಗಬಾರದು, ಬದಲಿಗೆ ಅಪವಾದವಾಗಿಯಷ್ಟೇ ಇರಬೇಕು ಎಂದು ನ್ಯಾಯಾಲಯಗಳು ಹೇಳಿರುವುದನ್ನು ನೆನಪಿಸಿದ ಪೀಠ.
Supreme Court of India
Supreme Court of India
Published on

ಅಪರಾಧ ಪ್ರಕರಣಗಳಲ್ಲಿ ತನಿಖೆಯು ಅಕಾರಣವಾಗಿ ವಿಳಂಬವಾಗುವುದಾಗಲಿ, ಸ್ಥಗಿತಗೊಳ್ಳುವುದಾಗಲಿ ಸಂಭವಿಸದ ಹೊರತು ನ್ಯಾಯಾಲಯಗಳು ತನಿಖೆಗೆ ಗಡುವು ವಿಧಿಸಿ ಆದೇಶ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ [ಉತ್ತರ ಪ್ರದೇಶ ಸರ್ಕಾರ ಮತ್ತು ಮೊಹಮ್ಮದ್‌ ಅರ್ಷದ್‌ ಖಾನ್‌ ನಡುವಣ ಪ್ರಕರಣ].

ತನಿಖೆಗೆ ಗಡುವು ವಿಧಿಸುವುದು ಸಾಮಾನ್ಯ ಕ್ರಮವಾಗಬಾರದು, ಬದಲಿಗೆ ಅಪವಾದವಾಗಿಯಷ್ಟೇ ಇರಬೇಕು ಎಂದು ನ್ಯಾಯಾಲಯಗಳು ಆಗಾಗ್ಗೆ ಹೇಳುತ್ತ ಬಂದಿವೆ ಎಂಬುದಾಗಿ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿತು.

Also Read
ವಿಚಾರಣೆ ವಿಳಂಬ ಹಿನ್ನೆಲೆ: ದೇಶದ ಎಲ್ಲಾ ಆಸಿಡ್ ದಾಳಿ ಪ್ರಕರಣಗಳ ವಿವರ ಕೇಳಿದ ಸುಪ್ರೀಂ ಕೋರ್ಟ್

ತನಿಖಾ ಪ್ರಕ್ರಿಯೆ ಕೆಲವೊಮ್ಮೆ ಸರಳವಾಗಿರುತ್ತದೆ. ಕೆಲವೊಮ್ಮೆ ಅನೇಕ ತಿರುವುಗಳಿಂದ ಕೂಡಿರುತ್ತವೆ, ತನಿಖಾ ದಿಕ್ಕನ್ನು ಮರುಸರಿಪಡಿಸಬೇಕಾಗಿರುತ್ತದೆ. ಇನ್ನೂ ಕೆಲ ಸಂದರ್ಭಗಳಲ್ಲಿ ತನಿಖೆಗಳು ಇದಲ್ಲಿಯೇ ಗಿರಕಿ ಹೊಡೆಯುತ್ತಿರುತ್ತವೆ ಎಂದು ನ್ಯಾಯಾಲಯ ವಿವರಿಸಿದೆ. ಆದ್ದರಿಂದ, ತನಿಖಾ ಸಂಸ್ಥೆಗಳಿಗೆ ಯುಕ್ತ ರೀತಿಯ ಸ್ವಾತಂತ್ರ್ಯ ನೀಡಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

“ಆರಂಭದಲ್ಲಿಯೇ ತನಿಖಾಧಿಕಾರಿಗಳು ಅಥವಾ ಕಾರ್ಯಾಂಗ ಪಾಲಿಸಬೇಕಾದ ಗಡುವನ್ನು ನ್ಯಾಯಾಲಯ ವಿಧಿಸುವುದಿಲ್ಲ. ಹಾಗೆ ಮಾಡಿದರೆ ಅದು ಅವರ ಕಾರ್ಯಕ್ಷೇತ್ರದ ಮೇಲೆ ನಡೆಸುವ ಅತಿಕ್ರಮಣವಾಗುತ್ತದೆ. ಆದ್ದರಿಂದ ಅಕಾರಣ ವಿಳಂಬ, ತನಿಖೆಯ ಸ್ಥಗಿತ ಇಲ್ಲವೇ ಅದೇ ರೀತಿಯ ದುಷ್ಪರಿಣಾಮ ಬೀರುವಂತಿದ್ದರೆ ಮಾತ್ರ ಗಡುವು ವಿಧಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ ಗಡುವನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿಧಿಸದೆ ಪ್ರತಿಕ್ರಿಯಾತ್ಮಕವಾಗಿಯಷ್ಟೇ ವಿಧಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಸಾಕ್ಷಿಗಳು ಹೇಳಿಕೆ ನೀಡಲು ಹಿಂಜರಿಯಬಹುದು ಅಥವಾ ಮಾಫಿ ಸಾಕ್ಷಿಯಾಗಿಬಿಡಬಹುದು ಇಲ್ಲವೇ ಸಾಕ್ಷ್ಯಗಳನ್ನು ಬಳಸುವುದು ಅಸಾಧ್ಯವಾಗಬಹುದು ಎಂಬ ಕಾರಣಗಳಿಂದಾಗಿ ಕೂಡ ತನಿಖೆಯಲ್ಲಿ ವಿಳಂಬವಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಹಲವಾರು ಬಾರಿ ಕಾನೂನು ಪ್ರಕ್ರಿಯೆಗಳು ತನಿಖೆಯ ಮಧ್ಯಪ್ರವೇಶಿಸುವುದರಿಂದ ಅದರ ವೇಗ ಮತ್ತು ದಿಕ್ಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದಾಗಿಯೂ ನ್ಯಾಯಾಲಯ ಹೇಳಿದೆ.

ನಿರೀಕ್ಷಣಾ ಜಾಮೀನು, ಜಾಮೀನು ಇಲ್ಲವೇ ಇನ್ನಿತರ ಅರ್ಜಿಗಳಿಂದಲೂ ತಾತ್ಕಾಲಿಕ ವಿರಾಮ ಅಥವಾ ತಂತ್ರದಲ್ಲಿ ಬದಲಾವಣೆಯಾಗಬಹುದು. ನ್ಯಾಯಾಲಯಗಳು ಹೆಚ್ಚುವರಿ ತನಿಖೆಗೆ ಸೂಚಿಸಬಹುದು, ನಿರ್ದಿಷ್ಟ ಅಂಶಗಳ ಕುರಿತು ಸ್ಪಷ್ಟೀಕರಣ ಕೇಳಬಹುದು ಅಥವಾ ತನಿಖಾಧಿಕಾರಿಯನ್ನು ಬದಲಾಯಿಸಲು ಸಹ ನಿರ್ದೇಶಿಸಬಹುದು. ಇಂತಹ ಪ್ರತಿಯೊಂದು ಮಧ್ಯಪ್ರವೇಶ ಕೂಡ ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮರುಪರಿಶೀಲಿಸಲು ಮತ್ತು ಕೆಲವೊಮ್ಮೆ ಸಂಪೂರ್ಣವಾಗಿ ಹೊಸ ದಾರಿಗೆ ಹೊರಳುವಂತೆ ಮಾಡುತ್ತದೆ,” ಎಂದು ನ್ಯಾಯಾಲಯ ತಿಳಿಸಿದೆ.

ಆದ್ದರಿಂದ ತ್ವರಿತ ವಿಚಾರಣೆಯ ಹಕ್ಕು ಸಮಯೋಚಿತ ಮತ್ತು ಪರಿಶ್ರಮಪೂರ್ಣ ತನಿಖೆಯನ್ನೂ ಒಳಗೊಂಡಿದೆ. ಅತಿಯಾದ ವಿಳಂಬ ಆರೋಪಿಯ ಸ್ವಾತಂತ್ರ್ಯ ಮತ್ತು ವರ್ಚಸ್ಸನ್ನು ಅನುಮಾನಾಸ್ಪದವಾಗಿಯೇ  ಉಳಿಯುವಂತೆ ಮಾಡುವುದಷ್ಟೇ ಅಲ್ಲ, ಸಂತ್ರಸ್ತ ವ್ಯಕ್ತಿಗೂ ಇಡೀ ಸಮಾಜಕ್ಕೂ ಹಾನಿಕಾರಕವಾಗುತ್ತದೆ ಎಂದಿದೆ.

ಹೀಗಾಗಿ ತನಿಖೆಯ ಪ್ರಾಯೋಗಿಕ ವಾಸ್ತವಾಂಶಗಳು ಮತ್ತು ಸಂವಿಧಾನಾತ್ಮಕವಾದ ತ್ವರಿತ ತನಿಖೆ ಇವೆರಡರ ನಡುವೆ ಸಮತೋಲನ ಸಾಧಿಸುವುದೇ ಸವಾಲಾಗಿದ್ದು. ಈ ಸಮತೋಲನಗೊಳಿಸುವ ಕೆಲಸವನ್ನು ನ್ಯಾಯಾಂಗ ನಿರ್ವಹಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Also Read
ನಟ ದಿಲೀಪ್ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣೆ ವಿಳಂಬ: ಸೆಷನ್ಸ್ ನ್ಯಾಯಾಲಯದ ವರದಿ ಕೇಳಿದ ಕೇರಳ ಹೈಕೋರ್ಟ್

ಆಯುಧ ಪರವಾನಗಿಗಳ ನಕಲು ಹಾಗೂ ದುರುಪಯೋಗಕ್ಕೆ ಸಂಬಂಧಿಸಿದ ಎಫ್‌ಐಆರ್‌ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ಒಂದೇ ರೀತಿಯ ಮೂರು ತೀರ್ಪುಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ, ಅಲಾಹಾಬಾದ್ ಹೈಕೋರ್ಟ್ ನೀಡಿದ್ದ 90 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂಬ ಗಡುವನ್ನು  ಹಾಗೂ ಬಂಧನದಿಂದ ರಕ್ಷಣೆಯ ಆದೇಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ರಾಜ್ಯ ಸರ್ಕಾರದ ಮೇಲ್ಮನವಿಗಳನ್ನು ಪುರಸ್ಕರಿಸಿತು. ಬಂಧಿಸದಂತೆ ಒದಗಿಸಲಾದ ತಾತ್ಕಾಲಿಕ ರಕ್ಷಣೆ ಮಾತ್ರ ಇನ್ನೂ ಎರಡು ವಾರಗಳವರೆಗೆ ಮುಂದುವರಿಯಲಿದೆ ಎಂದು ಅದು ತಿಳಿಸಿತು.

Kannada Bar & Bench
kannada.barandbench.com