ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಅವರಿಗೆ ಬುಧವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ನಾಬ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠವು ಅರ್ನಾಬ್ ಮತ್ತು ಇತರ ಇಬ್ಬರನ್ನು 50,000 ರೂಪಾಯಿ ಮುಚ್ಚಳಿಕೆ ಪಡೆದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಜಾಮೀನು ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ತಪ್ಪೆಸಗಿದೆ ಎಂದಿರು ಪೀಠವು ಕೂಡಲೇ ಆದೇಶ ಜಾರಿಗೊಳಿಸುವಂತೆ ಪೊಲೀಸ್ ಕಮಿಷನರ್‌ಗೆ ಸೂಚಿಸಿದೆ.
“ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಿಸಬೇಕಾದರೆ ವಾಸ್ತವದಲ್ಲಿ ಪ್ರಚೋದನೆ ನೀಡಿರಬೇಕು. ಒಬ್ಬರು ಮತ್ತೊಬ್ಬರಿಗೆ ಹಣ ನೀಡಬೇಕಿದ್ದು, ಅವರು ಆತ್ಮಹತ್ಯೆಗೆ ಶರಣಾದರೆ ಅದು ಪ್ರಚೋದನೆಯಾಗುತ್ತದೆಯೇ?... ಹೀಗಿದ್ದಾಗ ಅದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪ್ರಕರಣವಾಗುತ್ತದೆಯೇ?” ಎಂದು ಪೀಠ ಪ್ರಶ್ನಿಸಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಗೋಸ್ವಾಮಿ ಅವರು ಅಲ್ಲಿಂದ ಮನವಿ ಹಿಂಪಡೆದಿದ್ದರು ಎಂದು ಹೇಳಿದ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಅಮಿತ್ ದೇಸಾಯಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್ ಅವರು “ತಾಂತ್ರಿಕತೆಯ ಆಧಾರದಲ್ಲಿ ವ್ಯಕ್ತಿಯೊಬ್ಬರಿಗೆ ವೈಯಕ್ತಿಕ ಸ್ವಾತಂತ್ರ್ಯ ನಿರಾಕರಿಸಲಾಗದು. ಇದು ಭಯೋತ್ಪಾದನೆಯ ಪ್ರಕರಣವಲ್ಲ” ಎಂದರು.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜಾಮೀನಿಗಾಗಿ ಅಲಿಬಾಗ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಪರ್ಕಿಸುವಂತೆ ಅರ್ನಾಬ್ ಗೋಸ್ವಾಮಿಗೆ ತನ್ನ ಆದೇಶದಲ್ಲಿ ಸೂಚಿಸಿತ್ತು.