

ರಾಜಸ್ಥಾನದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಯೋಜನೆ (ಜೆಜೆಎಂ) ಜಾರಿ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಸಚಿವ ಮಹೇಶ್ ಜೋಶಿ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸಿಹ್ ಅವರಿದ್ದ ಪೀಠ ಈ ಆದೇಶ ನೀಡಿತು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿ ಖಾತೆ ಸಚಿವರಾಗಿದ್ದ ಜೋಶಿ ಅವರನ್ನು ಕಳೆದ ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿತ್ತು. ಖಾಸಗಿ ಸಂಸ್ಥೆಯೊಂದು ಸಚಿವರ ಮಗನ ಒಡೆತನದ ಕಂಪನಿಗೆ ₹50 ಲಕ್ಷ ಠೇವಣಿ ಇಟ್ಟಿದೆ. ಇದು ಲಂಚದ ಹಣವಾಗಿದೆ ಎಂದು ಇ ಡಿ ದೂರಿತ್ತು.
ಆಗಸ್ಟ್‌ನಲ್ಲಿ ರಾಜಸ್ಥಾನ ಹೈಕೋರ್ಟ್ ಜೋಶಿ ಅವರ ಮೇಲ್ಮನವಿ ತಿರಸ್ಕರಿಸಿತ್ತು, ಇದರಿಂದಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಉಳಿದೆಲ್ಲಾ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಅವರಂತೆಯೇ ತಮಗೂ ಸಮಾನವಾಗಿ ಜಾಮೀನು ನೀಡಬೇಕು. ತಾನು ಲಂಚ ಪಡೆದಿಲ್ಲ ಎಂದು ಜೋಶಿ ನ್ಯಾಯಾಲಯವನ್ನು ಕೋರಿದ್ದರು. ಜೋಶಿ ಅವರ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ವಿವೇಕ್ ಜೈನ್ ವಾದ ಮಂಡಿಸಿದರು.