

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಜಗತಾಪ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
ಜಗತಾಪ್ ಸುಮಾರು 5.5 ವರ್ಷಗಳಿಂದ ಬಂಧನದಲ್ಲಿದ್ದಾರೆ ಎಂಬ ವಿಚಾರ ಪರಿಗಣಿಸಿದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.
"ಅವರು 5 ವರ್ಷ 6 ತಿಂಗಳಿನಿಂದ ಬಂಧನದಲ್ಲಿದ್ದಾರೆ. ಕೋರಿಕೆಯಂತೆ ಪ್ರಕರಣವನ್ನು ಮುಂದೂಡಲಿ ಆದರೆ ಜಾಮೀನು ಮಂಜೂರು ಮಾಡಲಿ" ಎಂದು ಜ್ಯೋತಿ ಅವರ ಪರವಾಗಿ ಹಿರಿಯ ವಕೀಲೆ ಅಪರ್ಣಾ ಭಟ್ ಕೋರಿದರು. ನಂತರ ಪೀಠ ಮಧ್ಯಂತರ ಜಾಮೀನು ನೀಡಿತು.
ಪ್ರಕರಣದ ಕಿರಿಯ ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಅವರನ್ನು ಸೆಪ್ಟೆಂಬರ್ 8, 2020ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಅಕ್ಟೋಬರ್ 9, 2020ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಜ್ಯೋತಿ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ನಿಷೇಧಿತವಾದ ಸಂಘಟನೆ ಕಬೀರ್ ಕಲಾ ಮಂಚ್ (ಕೆಕೆಎಂ) ಸದಸ್ಯರಾಗಿದ್ದರು ಎಂದು ಆರೋಪಿಸಲಾಗಿತ್ತು. 2002ರ ಗುಜರಾತ್ ಗಲಭೆಯ ನಂತರ ತಮ್ಮ ಸಂಗೀತ ಮತ್ತು ಕಾವ್ಯದ ಮೂಲಕ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡ ಸಾಂಸ್ಕೃತಿಕ ಗುಂಪು ಇದಾಗಿದೆ.
ಫೆಬ್ರವರಿ 14, 2022ರಂದು ಎನ್ಐಎ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಕ್ಟೋಬರ್ 2022ರಲ್ಲಿ ಬಾಂಬೆ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.