
ಈಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟದ ಗೆಲುವು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟದ (ಇಂಡಿಯಾ) ಐವರು ಪರಾಜಿತ ಅಭ್ಯರ್ಥಿಗಳು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮನೋಹರ್ ಕೃಷ್ಣ ಮಾಧವಿ, ಪ್ರಶಾಂತ್ ಸುಧಾಮ್ ಜಗತಾಪ್, ಮಹೇಶ್ ಕೋಠೆ, ನರೇಶ್ ರತನ್ ಮನೆರಾ ಹಾಗೂ ಸುನೀಲ್ ಚಂದ್ರಕಾಂತ್ ಭುಸರ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು ಫಲಿತಾಂಶ ರದ್ದುಗೊಳಿಸುವಂತೆ ಕೋರಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿನ ನಕಲಿ ಮತದಾನ, ಕ್ರಿಮಿನಲ್ ಪ್ರಕರಣಗಳು ಹಾಗೂ ಆಸ್ತಿ ವಿವರಗಳ ಮರೆಮಾಚುವಿಕೆ, ಇವಿಎಂ ಅಸಮರ್ಪಕ ಕಾರ್ಯನಿರ್ವಹಣೆ, ಲಂಚ ಮತ್ತು ಚುನಾವಣಾ ಅವ್ಯವಹಾರದತ್ತ ಅರ್ಜಿ ಬೆರಳು ಮಾಡಿದೆ.
ಐರೋಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಸೇನೆ ಉದ್ಧವ್ ಬಣದ ಅಭ್ಯರ್ಥಿ ಮಾಧವಿ ಅವರು ಬಿಜೆಪಿಯ ಗಣೇಶ್ ಚಂದ್ರ ನಾಯ್ಕ್ ವಿರುದ್ಧ ಸೋಲನ್ನು ಕಂಡಿದ್ದರು. ಗಣೇಶ್ ನಾಯ್ಕ್ ಮತ್ತು ಚುನಾವಣಾ ಆಯೋಗ ದುರುದ್ದೇಶಪೂರಿತವಾಗಿ ನಕಲಿ ಮತದಾನಕ್ಕೆ ಅವಕಾಶ ನೀಡುವ ಮೂಲಕ ಚುನಾವಣಾ ಅವ್ಯವಹಾರ ಎಸಗಿದೆ, ಚುನಾವಣಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಧವಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪುಣೆಯ ಹಡಪ್ಸರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಭ್ಯರ್ಥಿ ಪ್ರಶಾಂತ್ ಸುಧಾಮ್ ಜಗತಾಪ್ ಅವರು ಅಜಿತ್ ಪವಾರ್ ಬಣಕ್ಕೆ ಸೇರಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚೇತನ್ ವಿಠ್ಠಲ್ ತುಪೆ ಎದುರು ಸೋಲನ್ನು ಕಂಡಿದ್ದರು. ಚೇತನ್ ವಿಠ್ಠಲ್ ತುಪೆ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 125ಎ ಅನ್ನು ಉಲ್ಲಂಘಿಸಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಮತ್ತು ಆದಾಯದ ವಿವರಗಳನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಲಾಪುರ ಉತ್ತರ ಕ್ಷೇತ್ರದ ಎನ್‌ಸಿಪಿ (ಎಸ್ ಪಿ) ಅಭ್ಯರ್ಥಿ ಮಹೇಶ್ ಕೋಠೆ ಅವರು ಬಿಜೆಪಿಯ ವಿಜಯಕುಮಾರ್ ದೇಶಮುಖ್ ಗೆಲುವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ದೇಶಮುಖ್ ಅವರು ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಸ್ಥಿರ ಆಸ್ತಿಗಳು ಮತ್ತು ಇತರ ಆಸ್ತಿಗಳ ಕುರಿತ ಮಾಹಿತಿಯನ್ನು ಸಲ್ಲಿಸಿಲ್ಲ. ಚುನಾವಣಾಧಿಕಾರಿ ಅಪರಿಪೂರ್ಣ ನಾಮಪತ್ರಗಳನ್ನು ಸ್ವೀಕರಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಓವಾಲಾ-ಮಜಿವಾಡ ಕ್ಷೇತ್ರದ ಶಿವಸೇನಾ (ಉದ್ಧವ್ ಬಣ) ಅಭ್ಯರ್ಥಿ ರತನ್ ಮನೇರಾ ಅವರು ಎನ್ ಸಿಪಿ ಶಾಸಕ ಪ್ರತಾಪ್ ಬಾಬುರಾವ್ ಸರ್ನಾಯಕ್ ಅವರ ಚುನಾವಣಾ ವಿಜಯವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ವಿಕ್ರಮಗಡ ಕ್ಷೇತ್ರದಿಂದ ಎನ್‌ಸಿಪಿಯ (ಶರದ್ ಪವಾರ್ ಬಣ ) ಮತ್ತೊಬ್ಬ ಅಭ್ಯರ್ಥಿ ಭುಸರ ಅವರು ಬಿಜೆಪಿಯ ಹರಿಶ್ಚಂದ್ರ ಸಖಾರಾಮ್ ಭೋಯೆ ಅವರ ಗೆಲುವನ್ನು ಪ್ರಶ್ನಿಸಿದ್ದಾರೆ.
ಇದಲ್ಲದೆ ದೇವೇಂದ್ರ ಫಡ್ನವೀಸ್ ಅವರ ಗೆಲುವನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಪ್ರಫುಲ್ಲ ವಿನೋದರಾವ್ ಗುಡಾಧೆ ಅವರು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ಮೆಟ್ಟಿಲೇರಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆಯ ನಡಾವಳಿಯನ್ನು ಅರ್ಜಿಗಳಲ್ಲಿ ಟೀಕಿಸಲಾಗಿದೆ.