ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ [ಎನ್ ವಿ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ತಮ್ಮ ವಿರುದ್ಧದ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಅಥವಾ ಅವುಗಳನ್ನೆಲ್ಲಾ ಒಗ್ಗೂಡಿಸಿ ದೆಹಲಿಗೆ ವರ್ಗಾಯಿಸುವಂತೆ ನೂಪುರ್ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ನೋಟಿಸ್ ನೀಡಿತು.
ಪ್ರಕರಣವನ್ನು ಆಗಸ್ಟ್ 10, 2022ಕ್ಕೆ ಪಟ್ಟಿ ಮಾಡಲಾಗಿದೆ. ಮುಖ್ಯ ದಾವೆಯ ಪ್ರತಿಗಳನ್ನು ಸಹ ಪ್ರತಿವಾದಿಗಳಿಗೆ ನೋಟಿಸ್‌ನೊಂದಿಗೆ ರವಾನಿಸಿ. ಸ್ಥಾಯಿ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿ. ಈ ಅವಧಿಯಲ್ಲಿ ಮಧ್ಯಂತರ ಕ್ರಮವಾಗಿ ನೂಪುರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೀಠ ಆದೇಶಿಸಿತು.
ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಪಡಿಸುವ ಸಲುವಾಗಿ ಶರ್ಮಾ ಅವರು ಹೈಕೋರ್ಟ್‌ಗೆ ತೆರಳಲು ಅವಕಾಶ ನೀಡುವ ಆಯ್ಕೆ ಅನ್ವೇಷಿಸುವುದಾಗಿ ನ್ಯಾಯಾಲಯ ಹೇಳಿದೆ. ಕೋಲ್ಕತ್ತಾ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದ್ದು ಈ ಹಿನ್ನೆಲೆಯಲ್ಲಿ ನೂಪುರ್ ಒಂದೇ ಹೈಕೋರ್ಟನ್ನು ಸಂಪರ್ಕಿಸಲು ಅನುವಾಗುವಂತೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ನೋಟಿಸ್ ಜಾರಿಗೊಳಿಸಿತು.
ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಾಗಿ ದೇಶದ ವಿವಿಧ ಭಾಗಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದೆಹಲಿಗೆ ವರ್ಗಾಯಿಸಬೇಕೆಂದು ಶರ್ಮಾ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಇಂದು ವಿಚಾರಣೆ ನಡೆಸಿದ್ದ ಪೀಠವೇ ಅಂದು ನೂಪುರ್ ವಿರುದ್ಧ ಟೀಕೆಗಳನ್ನು ಮಾಡಿತ್ತು. ದೇಶಾದ್ಯಂತ ಭಾವನೆಗಳನ್ನು ಕೆರಳಿಸಲು ನೂಪುರ್ ಶರ್ಮಾ ಏಕಮಾತ್ರ ಹೊಣೆ, ಆಕೆ ದೇಶದ ಕ್ಷಮೆಯಾಚಿಸಬೇಕು ಎಂದು ಅದು ಹೇಳಿತ್ತು.