ಅಕ್ರಮ ಹಣ ವರ್ಗವಣೆ ಪ್ರಕರಣ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ ವಿರುದ್ಧದ ಪಿಐಎಲ್‌ ವಿಚಾರಣಾರ್ಹವಲ್ಲ ಎಂದ ಸುಪ್ರೀಂ

ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಪಿಐಎಲ್ ವಿಚಾರಣಾರ್ಹ ಎಂದಿದ್ದ ಜಾರ್ಖಂಡ್ ಹೈಕೋರ್ಟ್‌ ಆದೇಶವನ್ನು ತಳ್ಳಿಹಾಕಿತು.
Hemant Soren and Supreme Court
Hemant Soren and Supreme Court

ಅಕ್ರಮ ಹಣ ವರ್ಗಾವಣೆ ಮತ್ತು ಗಣಿಗಾರಿಕೆ ಗುತ್ತಿಗೆ ನೀಡುವಲ್ಲಿ ಅಕ್ರಮ  ನಡೆದಿದೆ ಎಂದು ಆರೋಪಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಪಿಐಎಲ್‌ ವಿಚಾರಣಾರ್ಹ ಎಂದಿದ್ದ ಜಾರ್ಖಂಡ್ ಹೈಕೋರ್ಟ್‌ನ ಆದೇಶವನ್ನು ಬದಿಗೆ ಸರಿಸಿತು.

ಜಾರಿ ನಿರ್ದೇಶನಾಲಯದ (ಇಡಿ) ಮುಚ್ಚಿದ ಕವರ್ ವರದಿಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಸ್ವೀಕರಿಸಿದ ಬಳಿಕ ಜಾರ್ಖಂಡ್ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಸಿಬಿಐಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು.

Also Read
ನ್ಯಾ. ಉತ್ತಮ್‌ ಆನಂದ್‌ ಹತ್ಯೆಗೈದಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜಾರ್ಖಂಡ್‌ ನ್ಯಾಯಾಲಯ

ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯ ಅಂಗೀಕರಿಸಿದ ಬಗ್ಗೆ ರಾಜ್ಯ ಸರ್ಕಾರ ಎತ್ತಿದ್ದ ಆಕ್ಷೇಪವನ್ನು ಹೈಕೋರ್ಟ್ ಆರಂಭದಲ್ಲಿ ತಿರಸ್ಕರಿಸಿತ್ತು.  ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಶಿವಶಂಕರ್ ಶರ್ಮಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕುರಿತಂತೆ ಮೊದಲು ನಿರ್ಧರಿಸಬೇಕು ಎಂದು ಮೇ 24 ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು. ಅದರಂತೆ ಅರ್ಜಿ ವಿಚಾರಣಾರ್ಹ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಮತ್ತೆ ಇದನ್ನು ಪ್ರಶ್ನಿಸಿ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ಜಾರ್ಖಂಡ್‌ ಹೈಕೋರ್ಟ್‌ ವಿಚಾರಣೆಗೆ ತಡೆ ನೀಡಿತ್ತು. ಅಕ್ರಮ ಹಣ ವರ್ಗಾವಣೆಯ ವಿಸ್ತೃತ ಭಾಗವಾದ ಯಾವುದೇ ವಿಧೇಯ ಅಪರಾಧ (ಪ್ರಿಡಿಕೇಟ್‌ ಅಫೆನ್ಸ್) ದಾಖಲಾಗದಿದ್ದಾಗ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸುವುದಕ್ಕಾಗಿ ಪಿಐಎಲ್‌ ಮಾರ್ಗದ ಮೊರೆ ಹೋಗುವುದಕ್ಕೆ ನ್ಯಾಯಾಲಯ ತಡೆ ನೀಡಿತ್ತು.

ಜಾರ್ಖಂಡ್ ರಾಜ್ಯ ಮತ್ತು ಮುಖ್ಯಮಂತ್ರಿ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ಪ್ರತಿವಾದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com