

ತಂಜಾವೂರಿನ ಸರ್ಕಾರಿ ಭೂಮಿಯಿಂದ ಖಾಸಗಿ ವಿಶ್ವವಿದ್ಯಾಲಯವಾದ ಷಣ್ಮುಗ ಆರ್ಟ್ಸ್, ಸೈನ್ಸ್, ಟೆಕ್ನಾಲಜಿ ಅಂಡ್ ರಿಸರ್ಚ್ ಅಕಾಡೆಮಿ (ಎಸ್‌ಎಎಸ್‌ಟಿಆರ್‌ಎ- ಶಾಸ್ತ್ರ) ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ [ಶಾಸ್ತ್ರ ವಿಶ್ವವಿದ್ಯಾಲಯ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].
ಪ್ರಕರಣವನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ವಿಚಾರವಾಗಿ ಪರಿಗಣಿಸಬಾರದು. ಸಾರ್ವಜನಿಕ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಕಲ್ಯಾಣ ರಾಜ್ಯ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಕಿವಿಮಾತು ಹೇಳಿತು.
ಸಾರ್ವಜನಿಕ ಭೂಮಿಯ ಅತಿಕ್ರಮಣಕ್ಕೆ ಪ್ರೋತ್ಸಾಹ ನೀಡಬಾರದಾದರೂ ಪ್ರಸ್ತುತ ಪ್ರಕರಣ ವಾಣಿಜ್ಯ ಸಂಸ್ಥೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ಟದ್ದು ಎಂದ ಪೀಠ ಹಲವು ದಶಕಗಳಿಂದ ಸಾರ್ವಜನಿಕ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯವು ಈ ಭೂಮಿಯನ್ನು ಬಳಸಿಕೊಂಡಿದೆ. ಇಂತಹ ಸಂಸ್ಥೆಗಳ ವಿಚಾರದಲ್ಲಿ ರಾಜ್ಯಗಳು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ, ಶಾಸ್ತ್ರ ವಿಶ್ವವಿದ್ಯಾಲಯ ವಿವರವಾದ ದಾಖಲೆ ಒದಗಿಸಬೇಕು. ಅದನ್ನು ಸರ್ಕಾರ ನಾಲ್ಕು ವಾರಗಳಲ್ಲಿ ಪರಿಗಣಿಸಬೇಕು. ಅಂತಿಮವಾಗಿ ಪ್ರಕರಣ ನಿರ್ಧಾರವಾಗುವವರೆಗೆ ವಿವಿ ಈಗಿರುವ ಆವರಣದಲ್ಲಿ ಕಾರ್ಯನಿರ್ವಹಿಸಬಹುದು ಎಂದು ಅದು ತೀರ್ಪು ನೀಡಿತು.
ಸರ್ಕಾರಿ ಜಮೀನಿನಿಂದ ವಿವಿ ತೆರವುಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶ ಎತ್ತಿಹಿಡಿದು ಮದ್ರಾಸ್ ಹೈಕೋರ್ಟ್ ಜ. 9ರಂದು ನೀಡಿದ ಆದೇಶ ಪ್ರಶ್ನಿಸಿ ಶಾಸ್ತ್ರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದರಿಂದಾಗಿ 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ತನ್ನ ವಿಶೇಷ ಅನುಮತಿ ಅರ್ಜಿಯಲ್ಲಿ ಹೇಳಿತ್ತು.
ಈ ಭೂಮಿಯನ್ನು ತೆರೆದ ಜೈಲು ಸ್ಥಾಪಿಸಲು ಮೀಸಲಿಟ್ಟಿರುವುದಾಗಿ ರಾಜ್ಯ ಸರ್ಕಾರ ಹೇಳಿಕೆ ನೀಡಿದೆಯಾದರೂ ಅದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯಾಗಲೀ ಅಥವಾ ಕಾನೂನು ಘೋಷಣೆಯಾಗಲಿ ಇಲ್ಲ ಎಂದು ಶಾಸ್ತ್ರ ದೂರಿದೆ.
ಜೊತೆಗೆ, ಶಿಕ್ಷಣ ಸಂಸ್ಥೆಗಳೊಂದಿಗೆ ಸರ್ಕಾರಿ ಭೂಮಿಯ ವಿನಿಮಯಕ್ಕೆ ಅವಕಾಶ ನೀಡುವ ರಾಜ್ಯ ನೀತಿಯ ಅಡಿಯಲ್ಲಿ, ವಿವಾದಿತ ಭೂಮಿಗಿಂತ ಹೆಚ್ಚಿನ ವಿಸ್ತೀರ್ಣದ ಪರ್ಯಾಯ ಭೂಮಿಗಳನ್ನು ನೀಡಲು ಸಿದ್ಧವಿದ್ದೇವೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾಗಿ ವಿಶ್ವವಿದ್ಯಾಲಯ ತಿಳಿಸಿದೆ.
ವಿವಿ ಪರವಾಗಿ ಹಿರಿಯ ವಕೀಲರಾದ ಸಿ ಎಸ್ ವೈಧ್ಯನಾಥನ್ ಮತ್ತು ಮುಕುಲ್ ರೋಹಟ್ಗಿ ವಾದ ಮಂಡಿಸಿದರು. ತಮಿಳುನಾಡು ಸರ್ಕಾರವನ್ನು ರಾಕೇಶ್ ದ್ವಿವೇದಿ ಪ್ರತಿನಿಧಿಸಿದ್ದರು.