
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸೂಕ್ತವಾದ ಪ್ರದೇಶ ಎಂದು ಗುರುತಿಸಿರುವ ಗೋವಾದ ಮಹಾದಾಯಿ-ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆ ಕೈಗೆತ್ತಿಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ [ಗೋವಾ ಸರ್ಕಾರ ಮತ್ತು ಗೋವಾ ಪ್ರತಿಷ್ಠಾನ &ಇನ್ನಿತರರ ನಡುವಣ ಪ್ರಕರಣ].
ಆ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಜೊತೆಗೆ ಎಲ್ಲಾ ಭಾಗೀದಾರರ ವಾದ ಆಲಿಸಿ ಆರು ವಾರಗಳಲ್ಲಿ ನಿರ್ಧಾರ ಸಲ್ಲಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ , ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠ ಸೂಚಿಸಿತು.
ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮೂರು ತಿಂಗಳೊಳಗೆ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಗತ್ಯವಿರುವಂತೆ ಹುಲಿ ಸಂರಕ್ಷಣಾ ಯೋಜನೆಯನ್ನು ಸಿದ್ಧಪಡಿಸಲು ಬಾಂಬೆ ಹೈಕೋರ್ಟ್ ಜುಲೈ 2024ರಲ್ಲಿ ಆದೇಶಿಸಿತ್ತು.
ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ತನ್ನ ಸಂರಕ್ಷಣಾ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವುದಕ್ಕಾಗಿ ಗೋವಾ ಸರ್ಕಾರಕ್ಕೆ ಸಹಾಯ ಮಾಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕೂಡ ಹೈಕೋರ್ಟ್ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೋವಾ ಸರ್ಕಾರ ಇನ್ನಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೆ ಆರು ತಿಂಗಳೊಳಗೆ ಕಾವಲುಗಾರರು ಮತ್ತು ವೀಕ್ಷಕರೊಂದಿಗೆ ಆಯಕಟ್ಟಿನ ಸ್ಥಳಗಳಲ್ಲಿ ಬೇಟೆವಿರೋಧಿ ಶಿಬಿರಗಳನ್ನು ಸ್ಥಾಪಿಸಲು ಮತ್ತು ಅಧಿಸೂಚನೆ ಪ್ರಕ್ರಿಯೆಯ ಸಮಯದಲ್ಲಿ ಅಥವಾ ನಂತರ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಅತಿಕ್ರಮಣ ನಡೆಯದಂತೆ ನೋಡಿಕೊಳ್ಳುವಂತೆ ಹೈಕೋರ್ಟ್ ತಾಕೀತು ಮಾಡಿತ್ತು.
ಗೋವಾದ ಈಶಾನ್ಯ ವಲಯದಲ್ಲಿ 208 ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವಿರುವ, ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ಮಹಾದಾಯಿ ವನ್ಯಜೀವಿಧಾಮವನ್ನು ತಾನು ಬಹಳ ಹಿಂದಿನಿಂದಲೂ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಗೋವಾ ಸರ್ಕಾರಕ್ಕೆ ಆಗ್ರಹಪಡಿಸಿರುವುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.