ಯುಜಿಸಿಯ ಸಮತೆಯ ನಿಯಮಾವಳಿ: ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ

ನ್ಯಾಯಾಲಯ ಹಸ್ತಕ್ಷೇಪ ಮಾಡದಿದ್ದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಪೀಠ ನುಡಿಯಿತು.
ಯುಜಿಸಿಯ ಸಮತೆಯ ನಿಯಮಾವಳಿ: ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
Published on

ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ನಿಯಮಾವಳಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ.

ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಾವಳಿ- 2026 ನಿಯಮಾವಳಿ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತಿತ್ತು.

Also Read
ಯುಜಿಸಿಯ ಸಮತೆಯ ನಿಯಮಾವಳಿಗಳು ಸಾಮಾನ್ಯ ವರ್ಗದ ವಿರುದ್ಧ ಜಾತಿ ತರತಮಕ್ಕೆ ಕಾರಣವಾಗಬಹುದು ಎಂದು ಸುಪ್ರೀಂನಲ್ಲಿ ಅರ್ಜಿ

ಆದರೆ ಈ ನಿಯಮಾವಳಿಗಳ ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತರತಮ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ. ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡದಿದ್ದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನುಡಿಯಿತು.

“ನಾವು ಹಸ್ತಕ್ಷೇಪ ಮಾಡದಿದ್ದರೆ ಇದು ಗಂಭೀರ ಪರಿಣಾಮ ಉಂಟುಮಾಡುತ್ತದೆ, ಸಮಾಜವನ್ನು ವಿಭಜಿಸುತ್ತದೆ ಮತ್ತು ಭಾರೀ ಪರಿಣಾಮ ಬೀರುತ್ತದೆ,” ಎಂದು ಅದು ಹೇಳಿತು.

“ಮೇಲ್ನೋಟಕ್ಕೆ, ನಿಯಮಗಳಲ್ಲಿರುವ ಭಾಷೆ ಅಸ್ಪಷ್ಟವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಭಾಷೆಯನ್ನು ತಿದ್ದುಪಡಿ ಮಾಡಲು ತಜ್ಞರು ಪರಿಶೀಲಿಸಬೇಕಾಗಿದೆ,” ಎಂದು ನ್ಯಾಯಾಲಯ ತಿಳಿಸಿತು.

ಹೀಗಾಗಿ ಯುಜಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ನ್ಯಾಯಾಲಯ, ನಿಯಮಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲು ಆದೇಶಿಸಿತು.

“ಮಾರ್ಚ್ 19ರಂದು ನೋಟಿಸ್‌ಗೆ ಉತ್ತರ ಸಲ್ಲಿಸಬೇಕು. ಸಾಲಿಸಿಟರ್ ಜನರಲ್ ನೋಟಿಸ್ ಸ್ವೀಕರಿಸಿದ್ದಾರೆ. 2019ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಕೂಡ ಸಂವಿಧಾನಬದ್ಧತೆ ಪರಿಶೀಲನೆಗೆ ಸಂಬಂಧಿಸುತ್ತವೆ. ಆದ್ದರಿಂದ ಆ ಅರ್ಜಿಗಳನ್ನು ಇವುಗಳೊಂದಿಗೆ ಜೋಡಿಸಬೇಕು. ಮಧ್ಯಂತರವಾಗಿ, ಯುಜಿಸಿ ನಿಯಮಗಳು–2026ಅನ್ನು ತಡೆಹಿಡಿಯಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

Also Read
ಏನಾಗುತ್ತಿದೆ ಎಂಬುದು ತಿಳಿದಿದೆ ಎಂದ ಸುಪ್ರೀಂ: ಯುಜಿಸಿ ಸಮತೆಯ ನಿಯಮಾವಳಿ ಪ್ರಶ್ನಿಸಿದ್ದ ಅರ್ಜಿ ಆಲಿಸಲು ತೀರ್ಮಾನ

ಗಮನಾರ್ಹ ಅಂಶವೆಂದರೆ, ನಿಯಮಾವಳಿ ಸೆಕ್ಷನ್ 3(ಸಿ) ಮತ್ತು ಸೆಕ್ಷನ್ 3(ಇ) ಗಳ ನಡುವಿನ ಅಸಂಗತತೆಯನ್ನು ನ್ಯಾಯಾಲಯ ಉಲ್ಲೇಖಿಸಿತು. ತಾರತಮ್ಯವನ್ನು ವ್ಯಾಪಕವಾಗಿ ವ್ಯಾಖ್ಯಾನಿಸುವ ಸೆಕ್ಷನ್ 3 (ಇ) ಇರುವಾಗ, 3(ಸಿ) ಯ ಅಗತ್ಯವೇನು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.

ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಬಳಿಕವೂ ಜಾತಿ, ವರ್ಗ ಮತ್ತು ಪ್ರದೇಶ ಆಧಾರಿತ ಭೇದಭಾವ ಮುಂದುವರಿದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಾಲಯ, ಸಮಾಜವನ್ನು ವಿಭಜಿಸುವ ಯಾವುದೇ ವ್ಯವಸ್ಥೆಗಳನ್ನು ತಡೆಯಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಯುಜಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಅದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಪಡಿಸಿದೆ.

ಅರ್ಜಿದಾರರ ಪರ ವಕೀಲರಾದ ವಿಷ್ಣು ಜೈನ್ ವಾದ ಮಂಡಿಸಿದರು.

Kannada Bar & Bench
kannada.barandbench.com