ಪೆಗಸಸ್ ಬೇಹು ತಂತ್ರಾಂಶ ಪ್ರಕರಣ ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ತಂತ್ರಾಂಶವನ್ನು ಕೆಲವರ ಮೊಬೈಲ್ ಫೋನ್ ರೀತಿಯ ಸಾಧನಗಳಿಗೆ ಅಳವಡಿಸಿ ಮಾಹಿತಿ ಪಡೆಯುತ್ತಿದೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಹಲವು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
Pegasus Spyware, Supreme Court
Pegasus Spyware, Supreme Court
Published on

ಪತ್ರಕರ್ತರು, ನ್ಯಾಯಮೂರ್ತಿಗಳು,  ಸಾಮಾಜಿಕ ಹೋರಾಟಗಾರರು ಇನ್ನಿತರರ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಪೆಗಸಸ್‌ ಬೇಹು ತಂತ್ರಾಂಶ ಬಳಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಂದಿನ ತಿಂಗಳು (ಏಪ್ರಿಲ್‌) ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠದೆದುರು ಪ್ರಕರಣ ಬಂದಿತು. ಆಗ ನ್ಯಾಯಾಲಯ ಪ್ರಕರಣ ಇದೀಗ ವಿಚಾರಣೆಗೆ ಬರುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿತು.

Also Read
[ಪೆಗಸಸ್‌] ತನಿಖೆಗೊಳಪಡಿಸಿದ 29 ಮೊಬೈಲ್‌ಗಳಲ್ಲಿ ಪೆಗಸಸ್‌ ಪತ್ತೆಯಾಗಿಲ್ಲ; 5 ಫೋನ್‌ಗಳಲ್ಲಿ ಮಾಲ್ವೇರ್: ಸುಪ್ರೀಂ

ಆಗ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬಹಳ ಕಾಲದ ಬಳಿಕ ಪ್ರಕರಣ ವಿಚಾರಣೆಗೆ ಬರುತ್ತಿದೆ. ಏಪ್ರಿಲ್‌ ಮೊದಲ ವಾರದಲ್ಲಿ ನ್ಯಾಯಾಲಯ ವಿಚಾರಣೆ ನಡೆಸುವುದೇ ಎಂದು ಪ್ರಶ್ನಿಸಿದರು.

ಈ ವೇಳೆ ವಿವಿಧ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು "ಇದು ಪೆಗಸಸ್‌ ಪ್ರಕರಣ. ದೊಡ್ಡ ಪ್ರಮಾಣದ ಅರ್ಜಿಗಳಿವೆ" ಎಂದರು.

“ಏಪ್ರಿಲ್‌ನಲ್ಲಿ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು. ಈ ಪ್ರಕರಣ ಇದೀಗ ವಿಚಾರಣೆಗೆ ಬರುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಡಿಸೆಂಬರ್‌ನಲ್ಲಿಯಾದರೂ ಇದನ್ನು ಪಟ್ಟಿ ಮಾಡಿ ಎಂದು ಈ ಹಿಂದೆ ಆದೇಶಿಸಿದ್ದೆವು” ಎಂದು ಪೀಠ ನುಡಿಯಿತು. ಏಪ್ರಿಲ್ 22ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

ಕೇಂದ್ರ ಸರ್ಕಾರ ಪೆಗಸಸ್ ಬೇಹು ತಂತ್ರಾಂಶವನ್ನು ಕೆಲವರ ಮೊಬೈಲ್ ಫೋನ್ ರೀತಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಅವರ ಅರಿವಿಗೆ ಬಾರದಂತೆ ಅಳವಡಿಸಿ ಮಾಹಿತಿ ಪಡೆಯುತ್ತಿದೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಹಲವು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಇಸ್ರೇಲ್‌ ಮೂಲದ ಬೇಹು ತಂತ್ರಾಂಶ ಸಂಸ್ಥೆ ಎನ್‌ಎಸ್‌ಒ ತನ್ನ ಪೆಗಸಸ್‌ ಸ್ಪೈವೇರ್‌ಗೆ ಹೆಸರುವಾಸಿಯಾಗಿದ್ದು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿತ್ತು. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಇದು ಯಾವ ಸರ್ಕಾರಗಳಿಗೆ ತನ್ನ ವಿವಾದಿತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.

ಭಾರತೀಯ ಸುದ್ದಿ ಪೋರ್ಟಲ್ ದಿ ವೈರ್ ಸೇರಿದಂತೆ ಸುದ್ದಿ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟ 2021ರಲ್ಲಿ ಸರಣಿ ವರದಿಗಳನ್ನು ಬಿಡುಗಡೆ ಮಾಡಿತ್ತು., ಈ ಸಾಫ್ಟ್‌ವೇರ್ ಅನ್ನು ಭಾರತೀಯ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಅಧಿಕಾರಿಗಳು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವು ವ್ಯಕ್ತಿಗಳ ಮೊಬೈಲ್ ಸಾಧನಗಳಿಗೆ ಅಳವಡಿಸಿರಬಹುದು ಎಂದಿತ್ತು.

ಸಂಭಾವ್ಯ ಗುರಿಗಳಾಗಿ ಆಯ್ಕೆ ಮಾಡಲಾದ ಫೋನ್ ಸಂಖ್ಯೆಗಳ ಪಟ್ಟಿಯನ್ನು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಂಡ ನಡೆಸಿದ ವಿಶ್ಲೇಷಣೆ ಈ ಫೋನ್‌ ನಂಬರ್‌ಗಳಲ್ಲಿ ಕೆಲವಕ್ಕೆ ಪೆಗಸಸ್‌ ಬೇಹು ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿದ್ದರೆ ಮತ್ತೆ ಕೆಲವಕ್ಕೆ ಅದನ್ನು ಅಳವಡಿಸಲು ಯತ್ನಿಸಿದ ಕುರುಹುಗಳು ಕಂಡುಬಂದಿದೆ ಎಂದಿತ್ತು.

Also Read
ಪೆಗಸಸ್‌: 29 ಮೊಬೈಲ್‌ ಉಪಕರಣಗಳನ್ನು ಪರಿಶೀಲಿಸುತ್ತಿರುವ ತಜ್ಞರ ಸಮಿತಿ; ವರದಿ ಸಲ್ಲಿಕೆ ಗಡುವು ವಿಸ್ತರಿಸಿದ ಸುಪ್ರೀಂ

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಎದುರು ಪ್ರಸ್ತುತ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿದಾರರಲ್ಲಿ ವಕೀಲ ಎಂಎಲ್ ಶರ್ಮಾ,  ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ,  ಹಿಂದೂ ಸಮೂಹ ಪ್ರಕಟಣಾ ಸಂಸ್ಥೆಗಳ ನಿರ್ದೇಶಕ  ಎನ್ ರಾಮ್  ಮತ್ತು ಏಷ್ಯಾನೆಟ್ ಸಂಸ್ಥಾಪಕ  ಶಶಿಕುಮಾರ್ , ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ , ಪತ್ರಕರ್ತರಾದ  ರೂಪೇಶ್ ಕುಮಾರ್ ಸಿಂಗ್, ಇಪ್ಸಾ ಶತಾಕ್ಷಿ ,  ಪರಂಜಯ್ ಗುಹಾ ಠಾಕುರ್ತಾ ,  ಎಸ್‌ಎನ್‌ಎಂ ಅಬಿದಿ ಮತ್ತು ಪ್ರೇಮ್ ಶಂಕರ್ ಝಾ ಸೇರಿದ್ದಾರೆ.

ನಂತರ ಸುಪ್ರೀಂ ಕೋರ್ಟ್ ಹಗರಣದ ತನಿಖೆಗಾಗಿ ತ್ರಿಸದಸ್ಯ ತಜ್ಞರ ಸಮಿತಿ ರಚಿಸಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್  ನೇತೃತ್ವದ ಸಮಿತಿ  ಜುಲೈ 2022ರಲ್ಲಿ ಸಲ್ಲಿಸಿದ ವರದಿ, ಪರೀಕ್ಷಿಸಿದ ಇಪ್ಪತ್ತೊಂಬತ್ತು ಮೊಬೈಲ್ ಫೋನ್‌ಗಳಲ್ಲಿ ಬೇಹು ತಂತ್ರಾಂಶ ಕಂಡುಬಂದಿಲ್ಲ ಎಂದಿತ್ತು. 29 ಸಾಧನಗಳಲ್ಲಿ 5 ಸಾಧನಗಳಲ್ಲಿ ಕೆಲವು ಮಾಲ್‌ವೇರ್ ಕಂಡುಬಂದಿದೆ ಆದರೆ ಅದು ಪೆಗಸಸ್‌ ಅಲ್ಲ ಎಂದು ಸಮಿತಿ ತಿಳಿಸಿತ್ತು. ಭಾರತ ಸರ್ಕಾರ ಸಮಿತಿಯ ಕಾರ್ಯದಲ್ಲಿ ಸಹಾಯ ಮಾಡಿರಲಿಲ್ಲ ಎಂದು ಕೂಡ ಸಮಿತಿ ಈ ವೇಳೆ ಹೇಳಿತ್ತು. ಅದಾದ ಬಳಿಕ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹೆಚ್ಚಿನ ಬೆಳವಣಿಗೆ ಕಂಡು ಬಂದಿರಲಿಲ್ಲ.

Kannada Bar & Bench
kannada.barandbench.com