ಬಿಹಾರ ಜಾತಿ ಗಣತಿ ಪ್ರಶ್ನಿಸಿರುವ ಪಿಐಎಲ್ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ರಾಜ್ಯದಲ್ಲಿ ಜಾತಿ ಗಣತಿ ನಡೆಸಲು 2022ರಲ್ಲಿ ಬಿಹಾರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
Supreme Court of India
Supreme Court of India
Published on

ಬಿಹಾರದಲ್ಲಿ ಜಾತಿ ಗಣತಿ ನಡೆಸಲು ಜೂನ್ 2022ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್)  ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಮಂಗಳವಾರ ತಮ್ಮ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದ ಬಳಿಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರು ಜನವರಿ 20ರಂದು ಅರ್ಜಿ ಆಲಿಸಲು ಸಮ್ಮತಿ ಸೂಚಿಸಿದರು.

ರಾಜ್ಯದ ಅಧಿಸೂಚನೆ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. ಸರ್ಕಾರದ ಕ್ರಮ ಕಾನೂನುಬಾಹಿರ, ಮನಸೋಇಚ್ಛೆಯಿಂದ ಕೂಡಿರುವಂಥದ್ದು, ಅತಾರ್ಕಿಕವಾಗಿದ್ದು ಅಸಾಂವಿಧಾನಿಕವಾಗಿದೆ. ಜಾತಿಗಣತಿಗೆ ಕಾನೂನಿನಲ್ಲಿ ಯಾವುದೇ ಆಧಾರ ಇಲ್ಲ ಎಂದು ಅರ್ಜಿದಾರರಾದ ಅಖಿಲೇಶ್ ಕುಮಾರ್ ಅವರು ಆಕ್ಷೇಪಿಸಿದ್ದಾರೆ.

Also Read
ಜಾತಿ ಗಣತಿ - 2011ರ ದತ್ತಾಂಶ ಬಹಿರಂಗ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಲ್ಲದೆ ಶಾಸನ ಅಥವಾ ಸಾಂವಿಧಾನಿಕ ನಿಯಮಾವಳಿಗಳ ಬೆಂಬಲವಿಲ್ಲದೆ ಸರ್ಕಾರ ಇಂತಹ ಕ್ರಮ ಕೈಗೊಳ್ಳಲಾಗದು ಎಂದು ಮನವಿಯಲ್ಲಿ ಹೇಳಲಾಗಿದೆ.

ಜನಗಣತಿ ಕಾಯಿದೆ- 1948ರ ಸೆಕ್ಷನ್ 3ರ ಪ್ರಕಾರ ಇಡೀ ದೇಶದಲ್ಲಿ ಮತ್ತು ದೇಶದ ಯಾವುದೇ ಭೂಪ್ರದೇಶದಲ್ಲಿ ಜನಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಕಾಯಿದೆಯಡಿ ರಾಜ್ಯ ಸರ್ಕಾರಗಳಿಗೆ ಜನಗಣತಿ ನಡೆಸಲು ಅವಕಾಶವಿಲ್ಲ. ಜೊತೆಗೆ ಜಾತಿಗಣತಿಯನ್ನು ಜನಗಣತಿ ಕಾಯಿದೆಯಲ್ಲಿ ಪರಿಗಣಿಸಿಲ್ಲ ಎಂದು ಅರ್ಜಿ ತಿಳಿಸಿದೆ.

Kannada Bar & Bench
kannada.barandbench.com