ಆಂಧ್ರ, ತೆಲಂಗಾಣದಲ್ಲಿ 46 ಲಕ್ಷ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ: ವಿಚಾರಣೆಗೆ ಸುಪ್ರೀಂ ಸಮ್ಮತಿ

ಎಪಿಕ್ ಗುರುತಿನ ಚೀಟಿ ಜೊತೆಗೆ ಆಧಾರ್ ಜೋಡಿಸಿರುವ ಚುನಾವಣಾ ಆಯೋಗ ಅದನ್ನು ರಾಜ್ಯ ಸರ್ಕಾರಗಳಿಗೆ ಎಪಿಕ್ ಮಾಹಿತಿ ಪಡೆಯಲು, ಪ್ರತಿ ಮಾಡಿಕೊಳ್ಳಲು ಅನುವು ಮಾಡಿಕೊಡುವ ರಾಜ್ಯ ಸ್ಥಾನಿಕ ಮಾಹಿತಿ ಜಾಲಕ್ಕೆ ನೀಡಿದೆ ಎಂದು ದೂರಿದ ಅರ್ಜಿದಾರರು.
Election
ElectionA1
Published on

ʼಪರಿಷ್ಕರಣೆʼ ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮತದಾರರ ಪಟ್ಟಿಯಿಂದ 46 ಲಕ್ಷ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ದೂರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆ ಕೇಳಿದೆ [ಶ್ರೀನಿವಾಸ್‌ ಕೊಡಾಲಿ ಮತ್ತು ಭಾರತೀಯ ಚುನಾವಣಾ ಆಯೋಗ ನಡುವಣ ಪ್ರಕರಣ].

ಇದೊಂದು ಮುಖ್ಯ ಪ್ರಕರಣ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ)  ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರನ್ನೊಳಗೊಂಡ ಪೀಠ ಸಂಬಂಧಪಟ್ಟವರಿಗೆ ನೋಟಿಸ್‌ ನೀಡುವಂತೆ ಸೂಚಿಸಿ ಆರು ವಾರಗಳ ಬಳಿಕ ಪ್ರಕರಣ ಕೈಗತ್ತಿಕೊಳ್ಳಲು ನಿರ್ಧರಿಸಿತು.

Also Read
ಮತದಾರರ ಪಟ್ಟಿ ಮಾಹಿತಿ ಕಳವು ಪ್ರಕರಣ: ಆರೋಪಿಗಳನ್ನು ಡಿ.2ರ ವರೆಗೆ ಪೊಲೀಸ್ ವಶಕ್ಕೆ ನೀಡಿದ ನ್ಯಾಯಾಲಯ

ಅಲ್ಲದೆ ಆಧಾರ್‌ ಜೊತೆ ಎಪಿಕ್‌ (ಮತದಾರರ ಭಾವಚಿತ್ರ ಇರುವ ಗುರುತಿನ ಚೀಟಿ) ಜೋಡಿಸಿರುವ ಚುನಾವಣಾ ಆಯೋಗ, ರಾಜ್ಯ ಸರ್ಕಾರಗಳಿಗೆ ಎಪಿಕ್‌ ಮಾಹಿತಿ ಪಡೆಯಲು ಮತ್ತು ಪ್ರತಿ ಮಾಡಿಕೊಳ್ಳಲು ಅನುವು ಮಾಡಿಕೊಡುವ ರಾಜ್ಯ ಸ್ಥಾನಿಕ ಮಾಹಿತಿ ಜಾಲದೊಂದಿಗೆ (ಎಸ್‌ಆರ್‌ಡಿಎಚ್‌) ಅದನ್ನು ಹಂಚಿಕೊಂಡಿದೆ ಎಂದು ಅರ್ಜಿದಾರರಾದ ಶ್ರೀನಿವಾಸ್ ಕೊಡಾಲಿ ದೂರಿದ್ದಾರೆ.

ಆರಂಭದಲ್ಲಿ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಅರ್ಜಿದಾರರು ಡಿಸೆಂಬರ್ 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ಅಮಾಯಕ ಮತದಾರರಿಗೆ ಮತಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.

Also Read
ಮತದಾರರ ಮಾಹಿತಿ ಕಳವು ಪ್ರಕರಣ: ಐಎಎಸ್‌ ಅಧಿಕಾರಿ ಶ್ರೀನಿವಾಸ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ

ಆದರೆ ಮೂರು ವರ್ಷಗಳ ಬಳಿಕ ನಡೆದ ವಿಚಾರಣೆ ವೇಳೆ ʼಸಾಕಷ್ಟು ವಿಳಂಬವಾಗಿದೆʼ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಇಷ್ಟಾದರೂ ಹೈದರಾಬಾದ್ ನಿವಾಸಿ, ತಂತ್ರಜ್ಞಾನ ಸಂಶೋಧಕ ಹಾಗೂ ಐಐಟಿ ಮದ್ರಾಸ್‌ನ ಪದವೀಧರರಾಗಿರುವ ಅರ್ಜಿದಾರರು ಈ ಆದೇಶ  ದೋಷದಿಂದ ಕೂಡಿದೆ ಎಂದು ವಾದಿಸಿದ್ದಾರೆ.

ಇಸಿಐ ತನ್ನ ನಿಯಂತ್ರಣದಲ್ಲಿರುವ ಸರ್ಕಾರ ಅಥವಾ ಎಲೆಕ್ಟ್ರಾನಿಕ್ ಡೇಟಾಬೇಸ್‌ಗಳ ನೆರವು ಅಥವಾ ಸಹಾಯ ಪಡೆಯದೆಯೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂಬ ತನ್ನ ಸಾಂವಿಧಾನಿಕ ಕರ್ತವ್ಯ ಮತ್ತು ಶಾಸನಬದ್ಧ ಹೊಣೆಗಾರಿಕೆಯಿಂದ ವಿಮುಖವಾಗಿದೆ. ಜೊತೆಗೆ ಮತದಾರರ ಪಟ್ಟಿ ಸಿದ್ಧಪಡಿಸಲು ಅಪರಿಚಿತ ಮತ್ತು ಪಾರದರ್ಶಕವಲ್ಲದ ಸಾಫ್ಟ್‌ವೇರ್ ಬಳಕೆ  ಮಾಡುವುದು ಮತದಾನದ ಹಕ್ಕಿನ ಉಲ್ಲಂಘನೆ ಎಂದು ಅವರು ಪ್ರತಿಪಾದಿಸಿದ್ದಾರೆ. 

Kannada Bar & Bench
kannada.barandbench.com