ವ್ಯಭಿಚಾರದ ಆರೋಪಗಳನ್ನು ಸಾಬೀತುಪಡಿಸಲು ಹೋಟೆಲ್ ವಾಸ್ತವ್ಯ ಮತ್ತು ಕರೆ ವಿವರಗಳನ್ನು ಪಡೆಯುವಂತೆ ನಿರ್ದೇಶಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಜ್ಜಾಗಿದೆ.
ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಮೇಲ್ಮನವಿಯನ್ನು ಈಚೆಗೆ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು ಆಗಸ್ಟ್ 7ಕ್ಕೆ ಪ್ರಕರಣ ಮುಂದೂಡಿದೆ. ಇದಕ್ಕೂ ಮುನ್ನ ಅದು ಪ್ರತಿವಾದಿಗೆ ಉತ್ತರ ಸಲ್ಲಿಸಲು ಸಮಯಾವಕಾಶ ನೀಡಿತು.
ವ್ಯಭಿಚಾರದ ಪ್ರಕರಣವನ್ನು ಸಾಬೀತುಪಡಿಸಲು ಹೋಟೆಲ್ ವಾಸ್ತವ್ಯ ಮತ್ತು ಕರೆ ವಿವರಗಳನ್ನು (ಸಿಡಿಆರ್) ಪರಿಶೀಲಿಸುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದ ದೆಹಲಿ ಹೈಕೋರ್ಟ್ ಈ ವರ್ಷದ ಮೇ ತಿಂಗಳಲ್ಲಿ ನೀಡಿದ ಆದೇಶದಲ್ಲಿ ಹೇಳಿತ್ತು.
ಖಾಸಗಿತನದ ಹಕ್ಕು ಆತ್ಯಂತಿಕ ಹಕ್ಕಲ್ಲ, ಮತ್ತು ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದರೆ ಅದು ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ರೇಖಾ ಪಲ್ಲಿ ತಿಳಿಸಿದ್ದರು.
ಆದ್ದರಿಂದ, ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಇದ್ದ ಎನ್ನಲಾದ ಹೋಟೆಲ್ ಕೋಣೆಯ ದಾಖಲೆಗಳನ್ನು ಪಡೆಯಲು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಅನುಮತಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಪತಿಗೆ ಸೇರಿದ ಎರಡು ಫೋನ್ ನಂಬರ್‌ಗಳ ಸಿಡಿಆರ್ ವಿವರಗಳನ್ನು ಒದಗಿಸುವಂತೆಯೂ ನ್ಯಾಯಾಲಯ ಸೂಚಿಸಿತ್ತು.
ಈ ತೀರ್ಪನ್ನು ಪತಿ ಪ್ರಶ್ನಿಸಿದ್ದರು. ವಕೀಲೆ ಪ್ರೀತಿ ಸಿಂಗ್ ಅವರ ಮೂಲಕ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ಕೌಟುಂಬಿಕ ನ್ಯಾಯಾಲಯಕ್ಕೆ ಸಾಕ್ಷ್ಯ ಸಂಗ್ರಹಣೆಗೆ ಸಂಬಂಧಿಸಿದಂತೆ ಅತಿಯಾದ ಅಧಿಕಾರವನ್ನು ಹೈಕೋರ್ಟ್ ನೀಡಿದೆ ಎಂದು ತಿಳಿಸಲಾಗಿತ್ತು.
ವ್ಯಭಿಚಾರವನ್ನು ನಿರಪರಾಧೀಕರಿಸುವ ಸುಪ್ರೀಂ ಕೋರ್ಟ್ ತೀರ್ಪನ್ನು ಓದುವಲ್ಲಿ ಹೈಕೋರ್ಟ್ ಎಡವಿದೆ. ಲಿಂಗ ಸಮಾನತೆ, ವೈಯಕ್ತಿಕ ಆಯ್ಕೆ ಮತ್ತು ಎಲ್‌ಜಿಬಿಟಿ ಹಕ್ಕುಗಳಿಗೆ ಮನ್ನಣೆ ದೊರೆಯುತ್ತಿರುವ ಯುಗದಲ್ಲಿ ಉದ್ಯಾನವನ ಅಥವಾ ರೆಸ್ಟೋರೆಂಟ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಪುರುಷ ಮತ್ತು ಮಹಿಳೆ ಇದ್ದ ಮಾತ್ರಕ್ಕೆ ಅದನ್ನು ವ್ಯಭಿಚಾರ ಎನ್ನಲಾಗದು. ಹೀಗೆ ನಿರ್ಧಾರಕ್ಕೆ ಬರುವುದು ಹಳೆಯ ಕಾಲದ ಯೋಚನೆಯಾಗುತ್ತದೆ ಎಂದು ಸಮರ್ಥಿಸಿಕೊಳ್ಳಲಾಗಿತ್ತು.