ಸುಪ್ರೀಂ ಕೋರ್ಟ್ ಸ್ಥಾಪನೆಯಾದ 1950ನೇ ಇಸವಿಯಿಂದ ಈವರೆಗಿನ ಎಲ್ಲಾ ತೀರ್ಪುಗಳು ಶೀಘ್ರದಲ್ಲಿಯೇ ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್‌ನಲ್ಲಿ (ಎನ್‌ಜೆಡಿಜಿ) ಪ್ರಕರಣದ ಬಾಕಿ, ವಿಲೇವಾರಿ ಮತ್ತು ಫೈಲಿಂಗ್ ವಿವರಗಳ ಅಂಕಿಅಂಶಗಳೊಂದಿಗೆ ಲಭ್ಯವಾಗಲಿವೆ.
ಇದುವರೆಗೆ ಜಿಲ್ಲಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳನ್ನು ಮಾತ್ರ ಒಳಗೊಂಡಿದ್ದ ಇ-ಕೋರ್ಟ್‌ಗಳ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸುಪ್ರೀಂ ಕೋರ್ಟ್ ವಿವರಗಳೂ ಲಭ್ಯವಿರುತ್ತವೆ ಎಂದು ಉನ್ನತ ಮೂಲವೊಂದು ʼಬಾರ್ & ಬೆಂಚ್ʼಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಇ-ಸಮಿತಿ ಹಸಿರು ನಿಶಾನೆ ತೋರಿರುವ, ಯೋಜನೆಯನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐಸಿ) ಕಳೆದ ಎರಡು ವಾರಗಳಿಂದ ಅವಿರತವಾಗಿ ಶ್ರಮಿಸುತ್ತಿದೆ.
"ಹೈಕೋರ್ಟ್‌ನ 75 ಲಕ್ಷಕ್ಕೂ ಹೆಚ್ಚು ತೀರ್ಪುಗಳು ಡೇಟಾ ಗ್ರಿಡ್‌ನಲ್ಲಿ ಲಭ್ಯವಿದ್ದು ಈಗ ಸುಪ್ರೀಂ ಕೋರ್ಟ್ ಕೂಡ ಅದರಲ್ಲಿ ಸೇರ್ಪಡೆಗೊಳ್ಳುವ ಸಮಯ ಬಂದಿದೆ. ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು ಶೀಘ್ರದಲ್ಲೇ ಚಾಲನೆ ದೊರೆಯಲಿದೆ" ಎಂದು ಮೂಲದಿಂದ ತಿಳಿದು ಬಂದಿದೆ.
ಈ ನಿರ್ಧಾರ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಲಭ್ಯತೆಯಲ್ಲಿ ಗಮನಾರ್ಹ ಸುಧಾರಣೆ ತರುತ್ತದೆ ಏಕೆಂದರೆ ಇಲ್ಲಿಯವರೆಗೆ ತೀರ್ಪುಗಳನ್ನು ಮನುಪತ್ರ, ಎಸ್‌ಸಿಸಿ ಆನ್‌ಲೈನ್ ಮತ್ತಿತರ ಹಣ ಪಾವತಿಸಬೇಕಾದ ಕಾನೂನು ಜಾಲತಾಣಗಳ ಮೂಲಕ ಮಾತ್ರ ಪಡೆಯಬಹುದಾಗಿತ್ತು. ʼಇಂಡಿಯನ್ ಕಾನೂನ್ʼ ಜಾಲತಾಣ ಉಚಿತವಾಗಿ ಕಾನೂನು ಮಾಹಿತಿ ಒದಗಿಸುತ್ತಿದೆಯಾದರೂ ಎನ್‌ಜೆಡಿಜಿ ವ್ಯಾಪ್ತಿ ಹೆಚ್ಚು ವಿಸ್ತಾರವಾದುದಾಗಿದೆ.
ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಇ-ಸಮಿತಿಯು ಮೂರನೇ ಹಂತದಲ್ಲಿ ಇಡೀ ನ್ಯಾಯಾಂಗವನ್ನು ಇ-ಕೋರ್ಟ್ ಯೋಜನೆಯಡಿ ತರುವ ಕೆಲಸ ಮಾಡುತ್ತಿದ್ದು ನ್ಯಾ. ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಗಳಾಗುವ ಹೊತ್ತಿಗೆ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.