ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್‌ಡೌನ್‌: ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರವು ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Supreme Court, Uttar Pradesh
Supreme Court, Uttar Pradesh
Published on

ಕೋವಿಡ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್‌ಡೌನ್‌ ಘೋಷಿಸುವಂತೆ ಆದೇಶಿಸಿದ ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರವು ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇದೇ ವೇಳೆ ಹೇಳಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡುವುದಕ್ಕಾಗಿ ಹಿರಿಯ ವಕೀಲ ಪಿ ಎಸ್‌ ನರಸಿಂಹ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಲಾಗಿದೆ.

Also Read
ಅಲಾಹಾಬಾದ್‌ ಹೈಕೋರ್ಟ್‌ ಆದೇಶದ ಹೊರತಾಗಿಯೂ ಲಾಕ್‌ಡೌನ್‌ ಜಾರಿಗೊಳಿಸಲಾಗದು ಎಂದ ಉತ್ತರ ಪ್ರದೇಶ ಸರ್ಕಾರ

“ಗೌರವಾನ್ವಿತ ವಿಭಾಗೀಯ ಪೀಠದ ಆಕ್ಷೇಪಾರ್ಹವಾದ ಆದೇಶದ ಹಿಂದಿನ ಉದ್ದೇಶವು ಶ್ಲಾಘನೀಯ ಮತ್ತು ವಂದನಾರ್ಹವಾಗಿದೆ. ಆದರೆ, ಹೈಕೋರ್ಟ್ ಈ ರೀತಿಯ ಆದೇಶ ಹೊರಡಿಸುವ ಮೂಲಕ ಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಿಸಿದೆ. ಪ್ರಸ್ತುತ ಹಂತದಲ್ಲಿ ಹೈಕೋರ್ಟ್‌ ಆದೇಶವನ್ನು ಕಾರ್ಯಗತಗೊಳಿಸಿದರೆ, ರಾಜ್ಯದಲ್ಲಿ ಭೀತಿ, ಭಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ” ಎಂದು ತನ್ನ ಮನವಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಹೇಳಿದೆ.

“…ಗೌರವಾನ್ವಿತ ವಿಭಾಗೀಯ ಪೀಠವು ವಿಧಿಸಿರುವ ಹಠಾತ್ ಲಾಕ್‌ಡೌನ್ ಈ ನಗರಗಳ ನಾಗರಿಕರ ಮೇಲೆ ಮತ್ತು ಅದರ ಆಡಳಿತದ ಮೇಲೆ ಸರಿಪಡಿಸಲಾಗದ ಸಂಕಷ್ಟ ಮತ್ತು ಪರಿಣಾಮಗಳನ್ನು ಉಂಟುಮಾಡುತ್ತದೆ. ಲಾಕ್ ಡೌನ್ ಅನ್ನು ವಿಧಿಸುವ ನಿರ್ಧಾರವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೂಲಭೂತ ಅಂಶಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇಂತಹ ಕಠಿಣ ಕ್ರಮಗಳನ್ನು ಹೇರಲು, ಸಾರ್ವಜನಿಕರ ನಡುವೆ ಯಾವುದೇ ಭೀತಿ ಮತ್ತು ಭಯ ಹರಡದಂತೆ ನೋಡಿಕೊಳ್ಳಲು ಮತ್ತು ಅಗತ್ಯವಿರುವವರಿಗೆ ಪಡಿತರ ಅಥವಾ ಆಹಾರ ಪೂರೈಸುವ ನಿಟ್ಟಿನಲ್ಲಿ ಆಡಳಿತ ಯಂತ್ರವನ್ನು ಸಜ್ಜುಗೊಳಿಸಬೇಕಿದೆ” ಎಂದು ಹೇಳಿದೆ.

Kannada Bar & Bench
kannada.barandbench.com