ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕರ ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸುವುದನ್ನು ತಡೆಯುವ ಸುಪ್ರೀಂ ಕೋರ್ಟ್ ತೀರ್ಪನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಸರ್ಕಾರೇತರ ಸಂಸ್ಥೆ ʼಕಾಮನ್ ಕಾಸ್ʼನ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಸರ್ಕಾರೇತರ ಸಂಸ್ಥೆಗೆ ನೀಡಿದ ನೋಟಿಸನ್ನು ವಕೀಲ ಪ್ರಶಾಂತ್ ಭೂಷಣ್ ಸ್ವೀಕರಿಸಿದ್ದಾರೆ.
ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು. ಇ ಡಿ ನಿರ್ದೇಶಕರ ನೇಮಕಾತಿಯಲ್ಲಿ ಪೂರ್ವಾನ್ವಯವಾಗುವಂತೆ ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆಯಾದರೂ ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹಾಗೆ ಮಾಡಬೇಕು ಎಂದು ನ್ಯಾಯಾಲಯತೀರ್ಪಿನಲ್ಲಿ ತಿಳಿಸಿತ್ತು.
ಕೇಂದ್ರ ಜಾಗೃತ ಆಯೋಗ ಕಾಯಿದೆಯ ಸೆಕ್ಷನ್ 25 (ಎ) ಅಡಿಯಲ್ಲಿ ರಚಿಸಲಾದ ಸಮಿತಿಯು ಈ ವಿಸ್ತರಣೆಗೆ ಕಾರಣಗಳನ್ನು ದಾಖಲಿಸಿದ ನಂತರವೇ ಹಾಲಿ ನಡೆಯುತ್ತಿರುವ ತನಿಖೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಮಂಜಸವಾದ ಅವಧಿ ವಿಸ್ತರಣೆ ಮಾಡಬಹುದು ಎಂದು ನ್ಯಾಯಾಲಯ ವಿವರಿಸಿತು.
ಮಿಶ್ರಾ ಅವರ ಈ ಹಿಂದಿನ ಅಧಿಕಾರಾವಧಿ ವಿಸ್ತರಣೆಗಳನ್ನು ದೃಢಪಡಿಸಿದ್ದ ನ್ಯಾಯಾಲಯ ಮುಂದೆ ಅಂತಹ ವಿಸ್ತರಣೆ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಳೆದ ವರ್ಷ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ ತಿದ್ದುಪಡಿ ಮಾಡಿ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಆಯೋಗಕ್ಕೆ ಖುದ್ದು ಅಧಿಕಾರ ನೀಡಿತು. ಇದನ್ನು ಕನಿಷ್ಠ ಎಂಟು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.