
ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಹಾಗೂ ಮೀರನ್ ಹೈದರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಕರಣದ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ [ಉಮರ್ ಖಾಲಿದ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ, "ನ್ಯಾಯಮೂರ್ತಿ ಮನಮೋಹನ್ ಅವರಿಗೆ ವಿಚಾರಣೆ ನಡೆಸಲು ಸಾಧ್ಯವಾಗದ ಕಾರಣ ಶುಕ್ರವಾರ ಪ್ರಕರಣ ಆಲಿಸಲು ಸಾಧ್ಯವಾಗಲಿಲ್ಲ" ಎಂದಿತು.
ಆರೋಪಿಗಳು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ಅರ್ಜಿದಾರರರ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಗಮನಸೆಳೆದಾಗ, ನ್ಯಾಯಾಲಯ "ಹೌದು, ನಾವು ನಿಮ್ಮ ವಾದ ಆಲಿಸಿ ಪ್ರಕರಣ ಇತ್ಯರ್ಥಗೊಳಿಸುತ್ತೇವೆ, ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಜಾರಿ ಮಾಡುತ್ತೇವೆ" ಎಂದಿತು.
ದೀಪಾವಳಿಗೂ ಮುನ್ನ ವಾದ ಆಲಿಸಿ. ಆಗ ಅರ್ಜಿದಾರರು ದೀಪಾವಳಿಗೂ ಮುನ್ನ ಬಿಡುಗಡೆಯಾಗಬಹುದು ಎಂದು ಸಿಬಲ್ ಕೋರಿದರು. ಇದಕ್ಕೆ ದನಿಗೂಡಿಸಿದ ಸಿಂಘ್ವಿ ಅವರು "ವಿದ್ಯಾರ್ಥಿಯೊಬ್ಬ 5 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಗಿರುವುದು ಆಘಾತಕಾರಿ" ಎಂದು ವಾದಿಸಿದರು. ಅಕ್ಟೋಬರ್ 7 ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ಒಪ್ಪಿಕೊಂಡಿತು.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020 ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.
ಆರೋಪಿಗಳು ಹಲವು ಗಲಭೆಗಳು ಉಂಟಾಗುವಂತೆ ವಿಸ್ತೃತ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ದೆಹಲಿ ಪೊಲೀಸ್ ವಿಶೇಷ ಘಟಕ ಐಪಿಸಿ ಮತ್ತು ಯುಎಪಿಎ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿತ್ತು.
ಬಹುತೇಕ ಆರೋಪಿಗಳ ಮೇಲೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದು ನ್ಯಾಯಾಲಯಗಳಲ್ಲಿ ಹಲವು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020ರಿಂದ ಬಂಧನದಲ್ಲಿದ್ದಾರೆ.
ಸೆಪ್ಟೆಂಬರ್ 2 ರಂದು ದೆಹಲಿ ಹೈಕೋರ್ಟ್ ತಮಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಖಾಲಿದ್ ಇನ್ನಿತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.