ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ತನಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ [ರಾಹುಲ್ ಗಾಂಧಿ ವರ್ಸಸ್ ಪೂರ್ಣೇಶ್ ಮೋದಿ ಮತ್ತು ಇತರರು].
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠವು ಪೂರ್ಣೇಶ್ ಮೋದಿ ಮತ್ತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ.
“ನೋಟಿಸ್ ಜಾರಿ ಮಾಡಬೇಕು. ಮೊದಲ ಪ್ರತಿವಾದಿಗೆ ನೋಟಿಸ್ ನೀಡುವುದನ್ನು ಕೈಬಿಟ್ಟಿದ್ದು, ಮೊದಲ ಪ್ರತಿವಾದಿ ಪ್ರತಿನಿಧಿಸಿರುವ ವಕೀಲ ಜೇಠ್ಮಲಾನಿ ಅವರು ಲಿಖಿತ ಆಕ್ಷೇಪಣೆ ಸಲ್ಲಿಸಲು ಹತ್ತು ದಿನ ಕಾಲಾವಕಾಶ ಕೋರಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಕಾಂಗ್ರೆಸ್ ಜೊತೆಗೆ ತಮ್ಮ ತಂದೆ ಮತ್ತು ಸಹೋದರ ಗುರುತಿಸಿಕೊಂಡಿದ್ದನ್ನು ಮುಂದು ಮಾಡಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾ. ಗವಾಯಿ ಮುಂದಾದರು. ಆದರೆ, ನ್ಯಾ. ಗವಾಯಿ ಅವರು ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಉಭಯ ಪಕ್ಷಕಾರರು ಯಾವುದೇ ಆಕ್ಷೇಪಣೆ ಎತ್ತಲಿಲ್ಲ. ಅಂತಿಮವಾಗಿ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.