
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಔಪಚಾರಿಕ ನೋಟಿಸ್ ನೀಡಿದೆ [ಭಾರತದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆ ಹಿಡಿಯುವ ಇಲ್ಲವೇ ಕಾದಿರಿಸುವ ಕುರಿತಾದ ಸ್ವಯಂ ಪ್ರೇರಿತ ಪ್ರಕರಣ].
ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಪ್ರಕರಣದ ಸಂಬಂಧ ಸಹಾಯ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ , ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ವಿಕ್ರಮ್ ನಾಥ್ , ಪಿಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಪೀಠ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 29, ಮಂಗಳವಾರಕ್ಕೆ ನಿಗದಿಯಾಗಿದ್ದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ.
"ಪ್ರಕರಣದಲ್ಲಿ ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದು, ನಮಗೆ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಅವರನ್ನು ಕೋರಿದ್ದೇವೆ. ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ. ಸಾಲಿಸಿಟರ್ ಜನರಲ್ ಕೇಂದ್ರದ ಪರವಾಗಿ ಹಾಜರಾಗಬೇಕು. ಎಲ್ಲಾ ರಾಜ್ಯ ಸರ್ಕಾರಗಳಿಗೆ ಇಮೇಲ್ ಮೂಲಕ ನೋಟಿಸ್ ನೀಡಿ. ಮುಂದಿನ ಮಂಗಳವಾರ ಪ್ರಕರಣ ಪಟ್ಟಿ ಮಾಡಿ. ಎಲ್ಲಾ ಸ್ಥಾಯಿ ವಕೀಲರಿಗೂ ನೋಟಿಸ್ ನೀಡಿ" ಎಂದು ನ್ಯಾಯಾಲಯ ಹೇಳಿದೆ.
ಕ್ರಮವಾಗಿ ಕೇರಳ ಹಾಗೂ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಕೆ ಕೆ ವೇಣುಗೋಪಾಲ್ ಹಾಗೂ ಪಿ ವಿಲ್ಸನ್ ಅವರು ಪ್ರಕರಣದ ನಿರ್ವಹಣಾರ್ಹತೆಯ ಬಗ್ಗೆ ವಿಚಾರಣೆ ವೇಳೆ ಪ್ರಶ್ನಿಸಿದರು.
ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಪಡೆಯಲು ಅವಕಾಶ ನೀಡುವ ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸಕ್ತ ವಿಷಯವನ್ನು ಪರಿಶೀಲಿಸಲು ತಿಳಿಸಿದ್ದರು. ಈ ಸಂಬಂಧ ತೀರ್ಪು ನೀಡಲು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಲಾಗಿದೆ.
ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಕಾಲಮಿತಿ ನಿಗದಿಪಡಿಸಿದ್ದನ್ನು ಹಾಗೂ ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರ ಮಸೂದೆಗೆ ಒಪ್ಪಿಗೆ ನೀಡದೆ ಇರುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಕಳೆದ ಏಪ್ರಿಲ್‌ನಲ್ಲಿ ನೀಡಿದ ತೀರ್ಪಿನ ಪರಿಶೀಲನೆಗೆ ರಾಷ್ಟ್ರಪತಿಗಳ ಪತ್ರ ಪ್ರಶ್ನಿಸಿತ್ತು.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹದಿನಾಲ್ಕು ಪ್ರಶ್ನೆಗಳನ್ನು ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್ ಪರಿಶೀಲನೆಗೆ ಉಲ್ಲೇಖಿಸಿದ್ದರು. ಸಂವಿಧಾನದ 200ನೇ ವಿಧಿಯಡಿ ಗಡುವು ಇಲ್ಲದಿರುವುದನ್ನು ಮಸೂದೆಗಳಿಗೆ ಅಂಕಿತ ಹಾಕಲು ನೀಡುವ ಅನಿರ್ದಿಷ್ಟ ವಿಳಂಬ ಎಂದು ವ್ಯಾಖ್ಯಾನಿಸಲಾಗದು ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.
ರಾಜ್ಯಪಾಲರು ಸೂಕ್ತ ಸಮಯದೊಳಗೆ ಕ್ರಮ ಕೈಗೊಳ್ಳಬೇಕಿದ್ದು ಅವರು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ತಮ್ಮ ಸಾಂವಿಧಾನಿಕ ಮೌನವನ್ನು ಬಳಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತಿಳಿಸಿತ್ತು.
201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರಕ್ಕೆ ಸಂಬಂಧಿಸಿದಂತೆಯೂ ತೀರ್ಪು ನೀಡಿದ್ದ ಅದು ಸಂವಿಧಾನದ 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಕಾರ್ಯನಿರ್ವಹಣೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ರಾಷ್ಟ್ರಪತಿಯವರು ಮಸೂದೆಯನ್ನು ಸ್ವೀಕರಿಸಿದ 3 ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ, ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು ಎಂದಿತ್ತು.
ತೀರ್ಪನ್ನು ಅಂದಿನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಹಲವರು ಟೀಕಿಸಿದ್ದರು.ಇತ್ತ ತೀರ್ಪಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹದಿನಾಲ್ಕು ಪ್ರಶ್ನೆಗಳನ್ನೆತ್ತಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು.