ಮುಲ್ಲಪೆರಿಯಾರ್ ಅಣೆಕಟ್ಟು ಕೆಡವಿ ಹೊಸದು ನಿರ್ಮಿಸುವಂತೆ ಅರ್ಜಿ: ಕೇಂದ್ರ, ತಮಿಳುನಾಡಿಗೆ ಸುಪ್ರೀಂ ನೋಟಿಸ್

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಣೆಕಟ್ಟು ತಮಿಳುನಾಡು ಮತ್ತು ಕೇರಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಂಡು ಬಂದಿದೆ.
Mullaperiyar dam and Supreme Court
Mullaperiyar dam and Supreme Court
Published on

ಕೇರಳ ಮತ್ತು ತಮಿಳುನಾಡು ಪಾಲಿಗೆ ಮಹತ್ವದ ಪರಿಣಾಮ ಬೀರುವಂತಹ ಬೆಳವಣಿಗೆಯೊಂದರಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಅಣೆಕಟ್ಟು ನಿರ್ಮಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕೇರಳ ಮೂಲದ ಸೇವ್ ಕೇರಳ ಬ್ರಿಗೇಡ್ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

Also Read
ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತಾ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಇಂಗಿತ

ಮುಲ್ಲಪೆರಿಯಾರ್ ಅಣೆಕಟ್ಟು ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ ಎಂದು ಸಿಜೆಐ ಹೇಳಿದರು. ಇದಕ್ಕೆ ತಲೆದೂಗಿದ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ವಿ ಗಿರಿ ಅವರು 130 ವರ್ಷ ಹಳೆಯದು. ಸುಮಾರು ಒಂದು ಕೋಟಿ ಜನರು ಅಪಾಯದಲ್ಲಿದ್ದಾರೆ ಎಂದು ಗಮನ ಸೆಳೆದರು.  

 ನಂತರ ಸಿಜೆಐ ಗವಾಯಿ ಅವರು, ಅಣೆಕಟ್ಟನ್ನು ಬಲಪಡಿಸಲು ನಿರ್ದೇಶನ ನೀಡಬಹುದು ಅಥವಾ ಅದನ್ನು ನಿರ್ಣಯಿಸಲು ತಜ್ಞರ ಮಂಡಳಿ ನೇಮಿಸಬಹುದು ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಅಣೆಕಟ್ಟು ಎರಡು ರಾಜ್ಯಗಳನ್ನು ಒಳಗೊಂಡಿರುವುದರಿಂದ ಅದರ ಸಮಸ್ಯೆಗಳನ್ನು ವಿವರವಾಗಿ ಹೇಳಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಚಂದ್ರನ್ ಹೇಳಿದರು.

"ಸಮಸ್ಯೆ ನಿಖರವಾಗಿ ಏನು ಎಂದು ನೀವು ವಿವರಿಸಬೇಕು ಏಕೆಂದರೆ ಇನ್ನೊಂದು ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿಗೆ ನೀರು...??" ಎಂದು ಅವರು ಕೇಳಿದರು.

ಮತ್ತೊಂದು ಅಣೆಕಟ್ಟು ನಿರ್ಮಾಣಮಾಡಬಹುದಾಗಿದ್ದು ಸುಪ್ರೀಂ ಕೋರ್ಟ್ ಮಾತ್ರ ಆ ಕುರಿತು ನಿರ್ದೇಶನ ನೀಡಬಹುದು ಎಂದು ಗಿರಿ ಹೇಳಿದರು. ನಂತರ ನ್ಯಾಯಾಲಯ ನೋಟಿಸ್‌ ನೀಡಿತು.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಣೆಕಟ್ಟು ತಮಿಳುನಾಡು ಮತ್ತು ಕೇರಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಂಡು ಬಂದಿದೆ. ಅಣೆಕಟ್ಟು ಮತ್ತು ಅದರ ಜಲಾನಯನ ಪ್ರದೇಶ ಕೇರಳದೊಳಗೆ ಇದ್ದರೂ, ಅದರ ಜಲಾಶಯದ ನೀರನ್ನು ತಮಿಳುನಾಡು ಬಳಸುತ್ತದೆ ಮತ್ತು ಇದು ತಮಿಳುನಾಡಿನ ಐದು ಜಿಲ್ಲೆಗಳ ಜೀವನಾಡಿಯಾಗಿದೆ. ಅಣೆಕಟ್ಟು ಅಸುರಕ್ಷಿತ ಅದನ್ನು ಕೆಡವಬೇಕು ಎಂದು ಕೇರಳ ಹೇಳುತ್ತಿದ್ದರೆ, ತಮಿಳುನಾಡು ರಾಜ್ಯ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ವಾದಿಸುತ್ತಿದೆ.

Also Read
ಮುಲ್ಲಪೆರಿಯಾರ್ ಅಣೆಕಟ್ಟು ಬಲಪಡಿಸುವ ಪ್ರಯತ್ನಗಳನ್ನು ಕೇರಳ ವಿಫಲಗೊಳಿಸುತ್ತಿದೆ: ಸುಪ್ರೀಂಗೆ ತಮಿಳುನಾಡು ಮಾಹಿತಿ

2014ರಲ್ಲಿ ತಮಿಳುನಾಡು ಪರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಅಣೆಕಟ್ಟು ಸುರಕ್ಷಿತವಾಗಿದೆ; ನೀರಿನ ಮಟ್ಟ 142 ಅಡಿ ಇರಲಿ ಎಂದಿತ್ತು. ಅಣೆಕಟ್ಟು ನಿರ್ವಹಣೆ ಮೇಲ್ವಿಚಾರಣೆಗಾಗಿ ಸಮಿತಿ ನೇಮಿಸಿತ್ತು.

ನಂತರ 2018ರಲ್ಲಿ ಕೇರಳದಲ್ಲಿ ಪ್ರವಾಹ ತಲೆದೋರಿದಾಗ ನೀರಿನ ಮಟ್ಟವನ್ನು ತಾತ್ಕಾಲಿಕವಾಗಿ 139 ಅಡಿಗೆ ಇಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು. ಕೇರಳ ಸರ್ಕಾರ ಆಗ ಅಣೆಕಟ್ಟು ಕೆಡವುವಂತೆ ಮತ್ತೆ ಕೋರಿತ್ತು.

Kannada Bar & Bench
kannada.barandbench.com