ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಇಂದು ನಿವೃತ್ತಿ; ಔಪಚಾರಿಕ ಪೀಠದ ವೇಳೆ ಗದ್ಗದಿತ

ಭಾಷಣದ ಕೊನೆಯ ಹಂತದಲ್ಲಿ ಚಿತ್ರಗೀತೆಯ ಸಾಲೊಂದನ್ನು ಪ್ರಸ್ತಾಪಿಸಿ ನ್ಯಾಯಮೂರ್ತಿ ಶಾ ಗದ್ಗದಿತರಾದರು. ಇದು ಅಲ್ಲಿ ನೆರೆದಿದ್ದವರನ್ನು ಆರ್ದ್ರಗೊಳಿಸಿತು.
Justice MR Shah
Justice MR Shah

ಇಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಲಿರುವ ನ್ಯಾಯಮೂರ್ತಿ ಎಂ ಆರ್‌ ಶಾ ಅವರು ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಪಾಲ್ಗೊಂಡಿದ್ದ ಔಪಚಾರಿಕ ಪೀಠದ ವಿಚಾರಣೆ ವೇಳೆ ಭಾವುಕರಾದರು.

ಅವರ ಗೌರವಾರ್ಥ ನಡೆದ ಔಪಚಾರಿಕ ಪೀಠದ ವಿಚಾರಣೆ ವೇಳೆ ನ್ಯಾ. ಶಾ ತಮ್ಮನ್ನು ಹೊರಗೆ ಒರಟಾಗಿಯೂ, ಒಳಗೆ ಮೃದುವಾಗಿಯೂ ಇರುವ ತೆಂಗಿನಕಾಯಿಗೆ ಹೋಲಿಸಿಕೊಳ್ಳುತ್ತಾ ತಾನು ಭಾವಕನಾದರೆ ಕ್ಷಮಿಸುವಂತೆ ಕೇಳಿಕೊಂಡರು.

ತಮ್ಮ ಅಧಿಕಾರಾವಧಿಯಲ್ಲಿ ಬೆಂಬಲ ನೀಡಿದ ಸಿಜೆಐ ಡಿ ವೈ ಚಂದ್ರಚೂಡ್‌ ಸೇರಿದಂತೆ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೆ ಹಾಗೂ ಇಡೀ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ನಿರ್ಭೀತವಾಗಿ ಮತ್ತು ಪಕ್ಷಪಾತರಹಿತವಾಗಿ ತನ್ನ ಕರ್ತವ್ಯ ನಿರ್ವಹಿಸಿರುವುದಾಗಿ ಹೇಳಿದ ಅವರು ಗೊತ್ತಿಲ್ಲದೆಯೇ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸುವಂತೆ ಕೋರಿದರು.

Also Read
ಬೆದರಿಕೆ ಹಾಕದಿರಿ: ನ್ಯಾ. ಎಂ ಆರ್ ಶಾ ಮತ್ತು ಹಿರಿಯ ವಕೀಲ ದುಶ್ಯಂತ್ ದವೆ ನಡುವೆ ತೀವ್ರ ಮಾತಿನ ಚಕಮಕಿ

ಕಿರಿಯ ವಕೀಲರನ್ನು ಪ್ರೋತ್ಸಾಹಿಸುವಲ್ಲಿ ತಾನು ವಹಿಸಿದ ಶ್ರಮದ ಬಗ್ಗೆ ಅವರು ಮಾತನಾಡಿದ ಅವರು “ನಾನು ಹಿರಿಯ ಕಿರಿಯ ವಕೀಲರನ್ನು ಸಮನಾಗಿ ನಡೆಸಿಕೊಂಡಿದ್ದೇನೆ ಎಂದು ಜನ ಹೇಳುತ್ತಾರೆ. ಆದರೆ ಕಿರಿಯರನ್ನು ನಾನು ಹೆಚ್ಚು ಪ್ರೋತ್ಸಾಹಿಸಿದೆ ಎಂದು ಭಾವಿಸುವೆ. ಪ್ರಕರಣ ಮುಂದೂಡುವ ಅಥವಾ ಪ್ರಕರಣವನ್ನು ಉಲ್ಲೇಖಿಸುವ ವಕೀಲರು ಮಾತ್ರವೇ ಅಗದೆ ವಾದ ಮಂಡಿಸುವ ವಕೀಲರಾಗಬೇಕು ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.

ನ್ಯಾಯಾಂಗ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡಿದ ವಕೀಲ ವರ್ಗ, ರಿಜಿಸ್ಟ್ರಿ ಹಾಗೂ ಸಹಾಯಕ ಸಿಬ್ಬಂದಿಗೆ ಅವರು ಧನ್ಯವಾದ ತಿಳಿಸಿದರು.

ಭಾಷಣದ ಕೊನೆಯ ಹಂತದಲ್ಲಿ ನ್ಯಾ. ಶಾ ಅವರು ಮೇರಾ ನಾಮ್ ಜೋಕರ್ ಚಲನಚಿತ್ರದ 'ಜೀನಾ ಯಹಾ ಮರ್‌ನಾ ಯಹಾ' ಹಾಡನ್ನು ಪ್ರಸ್ತಾಪಿಸಿದರು. "ಕಲ್ ಖೇಲ್ ಮೇ ಹಮ್ ಹೋ ನಾ ಹೋ... ಗರ್ದಿಶ್ ಮೇ ತಾರೆ ರಹೇಂಗೆ ಸದಾ” (ನಾಳೆ ಆಟದಲ್ಲಿ ನಾನಿದ್ದರೂ ಇರದಿದ್ದರೂ, ಆಗಸದಲ್ಲಿ ಸದಾ ಇರಲಿವೆ ತಾರೆಗಳು)" ಎಂದ ನ್ಯಾ. ಶಾ ಗದ್ಗದಿತರಾದರು. ಇದು ಅಲ್ಲಿ ನೆರೆದಿದ್ದವರನ್ನು ಆರ್ದ್ರಗೊಳಿಸಿತು.

Related Stories

No stories found.
Kannada Bar & Bench
kannada.barandbench.com