

ಸಂವಿಧಾನದ ಮೂಲ ರಚನಾ ಸಿದ್ಧಾಂತವನ್ನುಎತ್ತಿಹಿಡಿದ ಕೇಶವನಾಂದ ಭಾರತಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದ ಮರುಪ್ರಸ್ತುತಿಗೆ ಹರಿಯಾಣದಲ್ಲಿರುವ ಒ ಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಆವರಣ ಶನಿವಾರ ಸಾಕ್ಷಿಯಾಯಿತು.
ಒ ಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವದ ಅತಿದೊಡ್ಡ ಅಣಕು ನ್ಯಾಯಾಲಯ ಎಂದು ಬಣ್ಣಿತವಾದ ʼನ್ಯಾಯಾಭ್ಯಾಸ ಮಂಟಪʼದ ಉದ್ಘಾಟನೆ ಸಂದರ್ಭದಲ್ಲಿ ಪ್ರಕರಣದ ತೀರ್ಪಿನ ಮರುಸೃಷ್ಟಿ ನಡೆಯಿತು. ನ್ಯಾಯಾಭ್ಯಾಸ ಮಂಟಪವನ್ನು ಕುಲಪತಿ ನವೀನ್ ಜಿಂದಾಲ್ ಮತ್ತು ಕುಲಪತಿ ಸಿ ರಾಜ್ ಕುಮಾರ್ ಔಪಚಾರಿಕವಾಗಿ ಉದ್ಘಾಟಿಸಿದರು.
ಈ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂತಿ ಸೂರ್ಯ ಕಾಂತ್ ನೇತೃತ್ವದಲ್ಲಿ 13 ನ್ಯಾಯಮೂರ್ತಿಗಳು ಪೀಠದ ಭಾಗವಾಗಿ ಪಾಲ್ಗೊಂಡರು. ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರ, ಅರವಿಂದ್ ಕುಮಾರ್, ಸಂಜಯ್ ಕರೋಲ್, ಎಂ.ಎಂ. ಸುಂದರೇಶ್, ಜೊಯಮಲ್ಯ ಬಾಗ್ಛಿ, ದೀಪಂಕರ್ ದತ್ತಾ, ಆರ್. ಮಹಾದೇವನ್, ಎ.ಜಿ. ಮಸೀಹ್ ಹಾಗೂ ರಾಜೇಶ್ ಬಿಂದಲ್ ಅವರೂ ಪೀಠದ ಸದಸ್ಯರಾಗಿದ್ದರು.
ವಾದಿಗಳ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಹಾಗೂ ತುಷಾರ್ ಮೆಹ್ತಾ, ಪ್ರತಿವಾದಿಗಳ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು.
ಈ ವೇಳೆ ಮಾತನಾಡಿದ ಸಿಜೆಐ ಸೂರ್ಯ ಕಾಂತ್ ಸಂವಿಧಾನದ ಮೂಲರಚನಾ ಸಿದ್ಧಾಂತ ನ್ಯಾಯಾಂಗದ ಕಲ್ಪನೆಯಲ್ಲ ಬದಲಿಗೆ ಸಂವಿಧಾನದ ಒಳಗಿನ ಹುಡುಕಾಟದ ಫಲ ಎಂದರು. ಸಂವಿಧಾನ ಅನುಕೂಲಕ್ಕೆ ತಕ್ಕಂತೆ ಬಾಗದೆ ಸಾಂವಿಧಾನಿಕ ನೀತಿ ಮತ್ತು ಪ್ರೌಢತೆಯ ಹಾದಿಯನ್ನು ಆಯ್ದುಕಕೊಳ್ಳಲು ಸುಪ್ರೀಂ ಕೋರ್ಟ್ 1973ರಲ್ಲಿ ನೀಡಿದ ತೀರ್ಪು ಅನುವು ಮಾಡಿಕೊಟ್ಟಿತು ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ವಾದಿಗಳ ಪರವಾಗಿ ವಾದಿಸಿದ ಸಿಂಘ್ವಿ ಹಾಗೂ ಮೆಹ್ತಾ ಅವರು ಸಂವಿಧಾನವನ್ನು ಜನ ತಮಗೆ ತಾವೇ ಅರ್ಪಿಸಿಕೊಂಡಿರುವುದರಿಂದ ಸಂವಿಧಾನವನ್ನು ತಿದ್ದಲು ಸಂಸತ್ತಿಗೆ ಅಸೀಮ ಅಧಿಕಾರ ನೀಡಿದರೆ ಜರ ಜನರ ಇಚ್ಛೆಯೇ ನಾಶವಾಗುತ್ತದೆ. ಸಂಸತ್ ಬಯಸಿದಾಗ ಸಂವಿಧಾನದ ಪೀಠಿಕೆ, ನ್ಯಾಯಾಂಗ ಪರಿಶೀಲನೆ ಮುಂತಾದ ಮೂಲ ಮೌಲ್ಯಗಳನ್ನೇ ಬದಲಿಸಿಬಿಟ್ಟರೆ ಮೂಲರಚನಾ ಸಿದ್ಧಾಂತ ಅಳಿದು ಹೋಗುವುದರಿಂದ ಇದು ಮೂಲ ಹಕ್ಕುಗಳಿಗೂ ಅಪಾಯಕರ ಎಂದರು.
ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದ ಎ ಜಿ ವೆಂಕಟರಮಣಿ ಹಾಗೂ ಲೂತ್ರಾ ಅವರು ಸಮಾಜ ಮತ್ತು ಪ್ರಜಾಪ್ರಭುತ್ವದ ಬದಲಾವಣೆಗಳಿಗೆ ಅನುಗುಣವಾಗಿ ಸಂವಿಧಾನವನ್ನು ವ್ಯಾಖ್ಯಾನಿಸಬೇಕಾಗಿದೆ. ಸಂವಿಧಾನದಲ್ಲಿ ಉಲ್ಲೇಖಿತವಾಗಿರದ ಮೂಲ ರಚನಾ ಸಿದ್ಧಾಂತ ಎಂಬ ಮಿತಿಯನ್ನು ನ್ಯಾಯಾಂಗ ಹೇರಿರುವುದು ಸಂಸತ್ತಿನ ಪ್ರಜಾಸತ್ತಾತ್ಮಕ ಅಧಿಕಾರವನ್ನು ಕುಗ್ಗಿಸುತ್ತದೆ ಎಂದರು.
ಪೀಠದ ಭಾಗವಾಗಿದ್ದ ನ್ಯಾ. ಬಿ ವಿ ನಾಗರತ್ನ ಜನರು ನ್ಯಾಯಾಂಗದ ಮೇಲೆ ನಂಬಿಕೆ ಇಡುವುದು ಅತ್ಯವಶ್ಯ. “ನ್ಯಾಯಾಂಗದ ಸ್ವತಂತ್ರತೆ ಮತ್ತು ನಿಷ್ಪಕ್ಷಪಾತತೆ ಕೇವಲ ಅಸ್ತಿತ್ವದಲ್ಲಿರುವುದಷ್ಟೇ ಅಲ್ಲ, ಜನರಿಗೆ ಗೋಚರವಾಗುವಂತೆಯೂ ಇರಬೇಕು” ಎಂದರು. ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ನ್ಯಾಯಾಂಗ ಅಧಿಕಾರಕ್ಕೆ ಅಂತರ್ಗತವಾಗಿರುವ ಸವಾಲುಗಳ ಬಗ್ಗೆ ಮಾತನಾಡಿದರು.