
ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡದೇ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಅನುಕೂಲವಾಗುವ ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ಲೋಕಾರ್ಪಣೆ ಮಾಡಿದೆ.
ವರ್ಚುವಲ್ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದರು. ಕೋವಿಡ್‌ನಿಂದ ಗುಣಮುಖರಾಗುತ್ತಿರುವ ಹಿರಿಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಂ ಖಾನ್ವಿಲ್ಕರ್ ಹಾಗೂ ನ್ಯಾಯಮೂರ್ತಿ ಹೇಮಂತ್ ಗುಪ್ತ ಇದ್ದರು.
ಕಲಾಪ ಆಲಿಸಲು ಪತ್ರಕರ್ತರು ವಕೀಲರನ್ನು ಆಧರಿಸುತ್ತಿದ್ದಾರೆ ಎಂಬ ವಿಚಾರ ನ್ಯಾಯಮೂರ್ತಿಗಳಿಗೆ ಗೊತ್ತಾಗಿತ್ತು ಎಂದು ಸಿಜೆಐ ರಮಣ ಹೇಳಿದರು. “ನ್ಯಾಯಾಲಯದ ವರದಿಗಾರಿಕೆ ಮಾಡಲು ಪತ್ರಕರ್ತರು ಲಿಂಕ್‌ಗಾಗಿ ವಕೀಲರನ್ನು ಆಧರಿಸುತ್ತಿದ್ದರು ಎಂಬ ವಿಚಾರ ನಮಗೆ ತಿಳಿಯಿತು. ಹೀಗಾಗಿ ಕಲಾಪವನ್ನು ಆಲಿಸಲು ಪತ್ರಕರ್ತರಿಗೆ ಅನುಕೂಲ ಮಾಡಿಕೊಡುವ ಬೇಡಿಕೆ ನಮ್ಮ ಮುಂದಿತ್ತು,” ಎಂದರು.
ತಾವು ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡ ಸಿಜೆಐ ರಮಣ ಅವರು, “ವರದಿಗಾರಿಕೆ ಮಾಡಲು ಮಾಧ್ಯಮಗಳು ದೊಡ್ಡ ಸವಾಲು ಎದುರಿಸುತ್ತವೆ. ಅಲ್ಪಕಾಲದವರೆಗೆ ನಾನು ಪತ್ರಕರ್ತನಾಗಿದ್ದೆ. ಆ ಸಂದರ್ಭದಲ್ಲಿ ನಮಗೆ ಕಾರು ಅಥವಾ ಬೈಕ್ ಇರಲಿಲ್ಲ… ಪತ್ರಕರ್ತನಾಗಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ” ಎಂದರು.
ತಾಂತ್ರಿಕ ಬಳಕೆಯ ಈ ಪಯಣದ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಮಣ ಎಚ್ಚರಿಸಿದರು. ವ್ಯವಸ್ಥೆಯನ್ನು ವಿಸ್ತರಿಸಲು ಅಗತ್ಯವಾದ ಸಮಯವನ್ನು ಎಲ್ಲರೂ ನೀಡಲಿದ್ದಾರೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
“ದೋಷಗಳನ್ನು ಅನಗತ್ಯವಾಗಿ ಎತ್ತಿ ದೊಡ್ಡದು ಮಾಡಬಾರದು. ಮಹತ್ವದ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸುವ ಸೂಚಕ ಮೋಡ್ ಅನ್ನು ಸಹ ನಾವು ಪರಿಚಯಿಸುತ್ತಿದ್ದೇವೆ” ಎಂದು ಸಿಜೆಐ ಇದೇ ವೇಳೆ ಬಹಿರಂಗಗೊಳಿಸಿದರು.
“ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಲು ಮಾಧ್ಯಮಗಳಿಗೆ ಅವಕಾಶ ಕಲ್ಪಿಸುವುದರಿಂದ ಪಾರದರ್ಶಕತೆ ಹೆಚ್ಚುತ್ತದೆ. ವರದಿಗಾರಿಕೆ ಮಾಡುವಾಗ ಜಾಗರೂಕವಾಗಿರಬೇಕು. ಒಂದು ಎಚ್ಚರಿಕೆ ಇದೆ, ನಿಮಗೆ ನೀಡಲಾದ ಲಿಂಕ್‌ಗಳನ್ನು ಉತ್ತಮ ರೀತಿಯಲ್ಲಿ ಬಳಸಬೇಕು ಮತ್ತು ಅನಧಿಕೃತ ವ್ಯಕ್ತಿಗಳು ಅದನ್ನು ಬಳಸುವಂತಿಲ್ಲ. ಇದು ಸಂಸ್ಥೆಗೆ ನ್ಯಾಯಯುತ ಎನಿಸದು” ಎಂದು ನ್ಯಾ. ಹೇಮಂತ್ ಗುಪ್ತಾ ತಿಳಿಸಿದರು.
ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಎಲ್ಲಾ ಆರು ಮಂದಿಯೂ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. “ಇದರಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಸಿಜೆಐ ಅವರು ಲೋಕಾರ್ಪಣೆಗೊಳಿಸಿದ ಈ ವ್ಯವಸ್ಥೆಯು ಎಲ್ಲರನ್ನೂ ಸುರಕ್ಷಿತವಾಗಿಸಿದೆ. ಪತ್ರಕರ್ತರು ಹೊರ ಜಗತ್ತಿಗೆ ಹೆಚ್ಚು ತೆರೆದುಕೊಂಡಿರುತ್ತಾರೆ. ಇದು ಮುಂದಿನ ದಿನಗಳಲ್ಲಿ ಸಿಜೆಐ ಕೈಗೊಳ್ಳಲಿರುವ ಹಲವು ಕ್ರಮಗಳ ಒಂದು ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ನ್ಯಾ. ಚಂದ್ರಚೂಡ್ ಹೇಳಿದರು.
“ಈ ಸಂಸ್ಥೆಯೊಂದಿಗಿನ ಪತ್ರಿಕೆಗಳ ಪ್ರಮುಖ ಒಡನಾಟವನ್ನು ಗಮನದಲ್ಲಿಟ್ಟುಕೊಂಡು, ಅವರು ಅಗತ್ಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆಂದು ನಮಗೆ ತಿಳಿದಿದೆ. ಈ ತಾತ್ಕಾಲಿಕ ಉಡುಗೊರೆಯನ್ನು ನೀಡುವ ಮೂಲಕ ಸಂಸ್ಥೆಯು ಮರುಪಾವತಿ ಮಾಡುತ್ತಿದೆ ಇದು ದೀರ್ಘಕಾಲದಲ್ಲಿ ಸ್ಮರಣೀಯವಾಗಿ ಉಳಿಯಲಿದೆ. ಈಗ ಇದು ತಾತ್ಕಾಲಿಕವಾಗಿರುತ್ತದೆ. ಆದರೆ ಭವಿಷ್ಯದಲ್ಲಿ ನಾವು ಎದುರಿಸುತ್ತಿರುವ ಕಾರ್ಯಾಚರಣೆಯ ಸಮಸ್ಯೆಗಳನ್ನು ಅವಲಂಬಿಸಿ ಶಾಶ್ವತವಾಗಬಹುದು” ಎಂದು ಅಪ್ಲಿಕೇಶನ್ ಶಾಶ್ವತವಾಗಿ ಉಳಿಯುವ ವಿಚಾರವಾಗಬಹುದು ಎನ್ನುವ ಬಗ್ಗೆ ನ್ಯಾಯಮೂರ್ತಿ ಖಾನ್ವಿಲ್ಕರ್ ಸೂಚನೆ ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೆಲವು ಪೀಠಗಳ ಕಲಾಪಗಳನ್ನು ಲೈವ್ ಸ್ಟ್ರೀಮ್ (ಅಂತರ್ಜಾಲದ ಮೂಲಕ ನೇರಪ್ರಸಾರ) ಮಾಡುವ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಸಿಜೆಐ ರಮಣ ಹೇಳಿದರು. ಮಾಧ್ಯಮ ಮತ್ತು ಸುಪ್ರೀಂ ಕೋರ್ಟ್ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡಲು ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದೂ ಸಿಜೆಐ ಹೇಳಿದರು.