
ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) 1908ರ ಆದೇಶ 47 ನಿಯಮ 1ರ ಅಡಿಯಲ್ಲಿ ತೀರ್ಪನ್ನು ಮರು ಪರಿಶೀಲಿಸಲು ನಡೆಸುವ ವಿಚಾರಣೆ ಮತ್ತು ಮೇಲ್ಮನವಿ ವಿಚಾರಣೆ ನಡುವೆ ಗೊಂದಲ ಮಾಡಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ [ಮಲ್ಲೀಶ್ವರಿ ಮತ್ತು ಕೆ ಸುಗುಣ ಇನ್ನಿತರರ ನಡುವಣ ಪ್ರಕರಣ].
ಮರುಪರಿಶೀಲನಾ ಅರ್ಜಿ ಸಾಮಾನ್ಯವಾಗಿ ನ್ಯಾಯಾಲಯ ನೀಡಿದ ತನ್ನದೇ ತೀರ್ಪನ್ನು ಮರುಪರಿಶೀಲಿಸಲು ಮತ್ತು ದಾಖಲೆಗೆ ಸಂಬಂಧಿಸಿದ ಗಂಭೀರ ದೋಷಗಳೇನಾದರೂ ಇದ್ದಲ್ಲಿ ಸರಿಪಡಿಸುವಂತೆ ಕೇಳಿಕೊಳ್ಳುವುದಕ್ಕೆ ಸಂಬಂಧಿಸಿದೆ. ಮತ್ತೊಂದೆಡೆ, ಮೇಲ್ಮನವಿ ಎಂಬುದು ಕೆಳ ನ್ಯಾಯಾಲಯದ ತೀರ್ಪನ್ನು ಉನ್ನತ ನ್ಯಾಯಾಲಯದ ಹೆಚ್ಚು ಸಮಗ್ರವಾಗಿ ಮರು ಪರಿಶೀಲಿಸಬೇಕು ಎಂಬ ಕೋರಿಕೆಯಾಗಿದೆ.
ನ್ಯಾಯಾಲಯಗಳು ಮೇಲ್ಮನವಿ ನ್ಯಾಯವ್ಯಾಪ್ತಿಯೊಂದಿಗೆ ಮರು ಪರಿಶೀಲನಾ ನ್ಯಾಯವ್ಯಾಪ್ತಿಯನ್ನು ಬೆರೆಸಬಾರದು ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಸೆಪ್ಟೆಂಬರ್ 8ರಂದು ನೀಡಿದ ತೀರ್ಪಿನಲ್ಲಿ ಎಚ್ಚರಿಕೆ ನೀಡಿದೆ.
ಮರು ಪರಿಶೀಲನಾ ಅರ್ಜಿಯು ಸೀಮಿತ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದ್ದು ಅದನ್ನು ಮಾರುವೇಷದ ಮೇಲ್ಮನವಿಯಾಗಿ ಬಳಸಲು ಅನುಮತಿ ಇರದು ಎಂದು ನ್ಯಾಯಾಲಯ ಹೇಳಿತು.
ಮರುಪರಿಶೀಲನಾ ಅರ್ಜಿ ಮಾನ್ಯವಾಗಲು ಅದು ಒಳಗೊಂಡಿರಬೇಕಾದ ಕೆಲ ಆಧಾರಗಳನ್ನು ಸುಪ್ರೀಂ ಕೋರ್ಟ್ ವಿವರಿಸಿದೆ.
ಮೂಲ ತೀರ್ಪು ನೀಡಿದಾಗ ಕಕ್ಷಿದಾರನಿಗೆ ತಿಳಿಯದ ಅಥವಾ ಶಕ್ತಾನುಸಾರ ಪರಿಶೀಲಿಸಿದರೂ ಪ್ರಸ್ತುತಪಡಿಸಲು ಸಾಧ್ಯವಾಗದಿದ್ದ ಕೆಲವು ಹೊಸ ಮತ್ತು ಪ್ರಮುಖ ಪುರಾವೆಗಳು ಅಥವಾ ಸಂಗತಿಗಳು ಪತ್ತೆಯಾದರೆ ಆಗ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು.
ದಾಖಲೆಗಳಲ್ಲಿ ಸ್ಪಷ್ಟ ದೋಷಗಳು ಇದ್ದಾಗ: ದೋಷ ಹೆಚ್ಚು ಚರ್ಚೆಗೆ ಆಸ್ಪದ ನೀಡದೆ ಸುಲಭವಾಗಿ ಕಾಣುವಂತಿರಬೇಕು. ತೀರ್ಪು ದೋಷಯುಕ್ತವಾಗಿದೆ ಎಂದು ಅನ್ನಿಸಿದ ಮಾತ್ರಕ್ಕೆ ಅದನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಲಾಗದು.
ಬೇರೆ ಯಾವುದೇ ಕಾರಣಕ್ಕಾಗಿ ಆಗಿದ್ದರೂ ಈ ಕಾರಣ ಮೊದಲ ಎರಡು ಆಧಾರಗಳಿಗೆ ಹೋಲುವಂತಿದ್ದರೆ ಆಗ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು.
ತನ್ನ ತಂದೆಯ ವಿರುದ್ಧ ಆಸ್ತಿ ವಿಭಜನೆಗೆ ಸಂಬಂಧಿಸಿದ ದಾವೆ ಹೂಡಿದ್ದ ಮಗನೊಬ್ಬನ ಪರವಾಗಿ ವಿಚಾರಣಾ ನ್ಯಾಯಾಲಯ ಮೂಲದಲ್ಲಿ ತೀರ್ಪು ನೀಡಿತ್ತು. ಆದರೆ ಮಗಳು ತನಗೂ ಆಸ್ತಿಯಲ್ಲಿ ಹಕ್ಕಿದೆ ಎಂದು ತಿದ್ದುಪಡಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತು. ನಂತರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಮೊದಲು ಮಗಳ ವಾದಗಳನ್ನು ಉಚ್ಚ ನ್ಯಾಯಾಲಯ ಒಪ್ಪಿತು. ಆದರೆ ಅರ್ಜಿಯ ಮರುಪರಿಶೀಲನೆ ವೇಳೆ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪುತ್ರಿ ಮರು ಪರಿಶೀಲನಾ ವ್ಯಾಪ್ತಿ ಮೇಲ್ಮನವಿಗೆ ಪರ್ಯಾಯವಾಗಬಾರದು ಎಂದು ವಾದಿಸಿದ್ದರು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾಸ್ತವಾಂಶಗಳನ್ನು ಮರು ಪರಿಶೀಲನೆ ನಡೆಸುವ ಮೂಲಕ, ಜೊತೆಗೆ ಈ ಹಿಂದೆ ತಾನು ನೀಡಿದ್ದ ಅವಲೋಕನಗಳನ್ನು ರದ್ದುಗೊಳಿಸುವ ಮೂಲಕ ಹೈಕೋರ್ಟ್ ಸೀಮಿತ ಮರುಪರಿಶೀಲನಾ ವ್ಯಾಪ್ತಿಯನ್ನು ಮೀರಿದೆ ಎಂದಿತು.
ಮರುಪರಿಶೀಲನಾ ವ್ಯಾಪ್ತಿಗೆ ಕಟ್ಟುನಿಟ್ಟಾದ ಮಿತಿಗಳಿವೆ ಎಂದ ಅದು ಹೈಕೋರ್ಟ್‌ನ ಮರು ಪರಿಶೀಲನಾ ಆದೇಶವನ್ನು ರದ್ದುಗೊಳಿಸಿತು. ಮಗಳಿಗೆ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ಘೋಷಿಸಿದ್ದ ಹೈಕೋರ್ಟ್‌ನ ಹಿಂದಿನ ಆದೇಶವನ್ನು ಮತ್ತೆ ಜಾರಿಗೆ ತಂದಿತು. ಅಂತೆಯೇ ಮೂರು ತಿಂಗಳೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅದು ನಿರ್ದೇಶಿಸಿತು.