
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ- 2017ರ (ಸಿಜಿಎಸ್‌ಟಿ ಕಾಯಿದೆ)ಸೆಕ್ಷನ್ 70ರ ಅಡಿಯಲ್ಲಿ ನೀಡಲಾದ ಸಮನ್ಸ್‌ಗಳು ಸೆಕ್ಷನ್ 6(2)(ಬಿ) ರ ಅರ್ಥದಲ್ಲಿ ವಿಚಾರಣಾತ್ಮಕ ಕ್ರಮಕ್ಕೆ ಸಮನಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ [ ಆರ್ಮೋರ್ ಸೆಕ್ಯುರಿಟಿ ಮತ್ತು ದೆಹಲಿಯ ಸಿಜಿಎಸ್‌ಟಿ ಆಯುಕ್ತರ ನಡುವಣ ಪ್ರಕರಣ].
ಆದ್ದರಿಂದ, ತನಿಖಾ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ಅಧಿಕಾರಿಗಳಿಗೆ ಸಮಾನಾಂತರ ವಿಚಾರಣೆಗಳನ್ನು ನಡೆಸಲು ಅದು ಅವಕಾಶ ಮಾಡಿಕೊಟ್ಟಿತು.
ಜಿಎಸ್‌ಟಿ ಆಡಳಿತದಲ್ಲಿ ಏಕ ಇಂಟರ್‌ಫೇಸ್ ಮತ್ತು ಪಾಟಿ ಸಬಲೀಕರಣದ ತತ್ವಗಳನ್ನು ಸಮತೋಲನಗೊಳಿಸುವ ಗುರಿ ಹೊಂದಿರುವ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ಪ್ರಾಧಿಕಾರಗಳು ಯಥಾವತ್ ವಿಚಾರಣಾತ್ಮಕ ಕ್ರಮಕ್ಕೆ ಮುಂದಾಗುವುದನ್ನು ತಡೆಯಲು ನ್ಯಾಯಾಲಯ ಮಾರ್ಗಸೂಚಿಗಳನ್ನು ಕೂಡ ಹೊರಡಿಸಿತು.
ಸೆಕ್ಷನ್ 70 ಅಡಿಯಲ್ಲಿ ಹೊರಡುವ ಸಮನ್ಸ್ ವಿಚಾರಣೆಯ ಆರಂಭ ಎಂದು ಪರಿಗಣಿಸಲಾಗದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ತಿಳಿಸಿತು.
ಅಲ್ಲದೆ ಸೆಕ್ಷನ್ 6(2)(b) ನಲ್ಲಿರುವ "ಪ್ರಕ್ರಿಯೆಗಳು" ಸೆಕ್ಷನ್ 73 ಮತ್ತು 74 ರಂತಹ ಸೆಕ್ಷನ್‌ಗಳ ಅಡಿಯಲ್ಲಿ ಮೌಲ್ಯಮಾಪನ, ಬೇಡಿಕೆ ಮತ್ತು ದಂಡದಂತಹ ತೀರ್ಪು ಪ್ರಕ್ರಿಯೆಗಳನ್ನು ಉಲ್ಲೇಖಿಸುತ್ತವೆಯೇ ಹೊರತು ಪ್ರಾಥಮಿಕ ತನಿಖಾ ಹಂತಗಳನ್ನು ಅಲ್ಲ ಎಂದು ಅದು ಹೇಳಿತು. ಸೆಕ್ಷನ್ 70 ರ ಅಡಿಯಲ್ಲಿ ಸಮನ್ಸ್ ಅನ್ನು ಸಾಕ್ಷ್ಯ ಸಂಗ್ರಹಣೆಗೆ ಒಂದು ಸಾಧನವೆಂದು ಪರಿಗಣಿಸಬಹುದು ಮತ್ತು ಅದು ವಿಚಾರಣೆಯ ಪ್ರಾರಂಭಕ್ಕೆ ಸಮನ್ಸ್ ಆಗಿರುವುದಿಲ್ಲ ಎಂದು ಪೀಠ ನುಡಿಯಿತು.
ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಾಧಿಕಾರಗಳು ವಿಚಾರಣಾತ್ಮಕ ಕ್ರಮಕ್ಕೆ ಮುಂದಾಗುವುದನ್ನು ತಡೆಯಲಾಗಿದ್ದರೂ ತನಿಖಾ ಹಂತದಲ್ಲಿ ಸಮಾನಾಂತರ ವಿಚಾರಣೆ ನಡೆಯಬಹುದು ಎಂದು ಅದು ಹೇಳಿತು.
ಜಿಎಸ್‌ಟಿ ನೀತಿ ಏಕ ಇಂಟರ್‌ಫೇಸ್ ಮಾದರಿ ಮತ್ತು ಪಾಟಿ ಸಬಲೀಕರಣ ಎಂಬ ಎರಡು ವಿಚಾರಗಳನ್ನು ಆಧರಿಸಿದ್ದು ಕೇಂದ್ರ ಮತ್ತು ರಾಜ್ಯ ಪ್ರಾಧಿಕಾರಗಳು ತೆರಿಗೆದಾರರ ನೆಲೆಯಲ್ಲಿ ಗುಪ್ತಚರ ಆಧಾರಿತ ಜಾರಿಗೊಳಿಸುವಿಕೆಯ ಮೇಲೆ ಕಾರ್ಯನಿರ್ವಹಿಸಲು ಅದು ಅನುವು ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸಮನ್ಸ್‌ಗಳನ್ನು ಸಂಯಮದಿಂದ ಮತ್ತು ಅಗತ್ಯವಿದ್ದರಷ್ಟೇ ಬಳಸಬೇಕು. ಜಿಎಸ್‌ಟಿ ಪೋರ್ಟಲ್‌ನಲ್ಲಿ ಈಗಾಗಲೇ ದಾಖಲೆ ಲಭ್ಯವಿದ್ದರೆ ಅವೇ ದಾಖಲೆಗಳನ್ನು ಬಯಸಿ ಅತಿಯಾಗಿ ಸಮನ್ಸ್ ನೀಡಬಾರದು ಎಂಬಂತಹ ಹೊಸ ಮಾರ್ಗಸೂಚಿಗಳನ್ನೂ ಅದು ಇದೇ ವೇಳೆ ಪ್ರಕಟಿಸಿತು.
ಹಿನ್ನೆಲೆ
ಭದ್ರತಾ ಸೇವೆ ಒದಗಿಸುವ ಸಾರ್ವಜನಿಕ ಸೀಮಿತ ಕಂಪನಿಯಾದ ಆರ್ಮರ್ ಸೆಕ್ಯುರಿಟಿಗೆ 2020- 21ನೇ ತೆರಿಗೆ ಸಾಲಿನಲ್ಲಿ ನವೆಂಬರ್ 2024 ರಲ್ಲಿ ದೆಹಲಿಯ ಜಿಎಸ್‌ಟಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ್ದರು.
ಜನವರಿ 2025 ರಲ್ಲಿ, ಸಿಜಿಎಸ್‌ಟಿ ದೆಹಲಿ ಪೂರ್ವ ಕಮಿಷನರೇಟ್‌ನ ಅಧಿಕಾರಿಗಳು ಸೆಕ್ಷನ್ 67(2) ರ ಅಡಿಯಲ್ಲಿ ಕಂಪನಿಯ ಆವರಣ ಶೋಧಿಸಿ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು. ಜನವರಿ 16 ಮತ್ತು 23ರಂದು ಕಂಪನಿ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿ, ಸಂಬಂಧಿತ ದಾಖಲೆಗಳನ್ನು ನೀಡುವಂತೆ ನಿರ್ದೇಶಿಸಿದ್ದರು.
ಪ್ರಾಧಿಕಾರವೊಂದು ಈಗಾಗಲೇ ಕ್ರಮ ಕೈಗೊಂಡಿದ್ದರೂ ನಂತರ ಅದೇ ಪ್ರಕರಣದ ಕುರಿತು ಎರಡನೇ ಪ್ರಾಧಿಕಾರ ವಿಚಾರಣೆ ಆರಂಭಿಸುವುದನ್ನು ಸಿಜಿಎಸ್‌ಟಿ ಕಾಯಿದೆಯ ಸೆಕ್ಷನ್ 6(2)(ಬಿ) ನಿಷೇಧಿಸುತ್ತದೆ ಎಂದು ಕಂಪನಿ ವಾದಿಸಿತ್ತು. ಕೇಂದ್ರ ಜಿಎಸ್‌ಟಿ ಸಮನ್ಸ್ ರಾಜ್ಯ ಜಿಎಸ್‌ಟಿ ಇಲಾಖೆಯಿಂದ ಈಗಾಗಲೇ ವಿಚಾರಣೆಯಲ್ಲಿರುವ ಅದೇ ವಿಚಾರಗಳನ್ನು ಒಳಗೊಂಡಿದೆ ಎಂದು ಅದು ದೂರಿತ್ತು.