ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಭೂಗಡಿ ಗುರುತಿಸುವ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಮೇಘಾಲಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.
ಮೇಘಾಲಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಎರಡು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.
“ಮೇಲ್ನೋಟಕ್ಕೆ (ತಡೆಯಾಜ್ಞೆ ವಿಧಿಸಿದ) ಮಧ್ಯಂತರ ಆದೇಶಕ್ಕೆ (ಹೈಕೋರ್ಟ್‌ನ) ಏಕಸದಸ್ಯ ಪೀಠ ಯಾವುದೇ ಕಾರಣ ನೀಡಿಲ್ಲ. ಎಂಒಯುಗಳಿಗೆ ಸಂಸತ್ತಿನ ಅನುಮೋದನೆ ಅಗತ್ಯವಿದೆಯೇ ಎಂಬುದು ಪ್ರತ್ಯೇಕ ವಿಷಯವಾಗಿದೆ. ಆದರೆ ಎಂಒಯುಗೆ ತಡೆ ನೀಡುವ ಮಧ್ಯಂತರ ಆದೇಶಕ್ಕೆ ಸಮರ್ಥನೆಗಳಿಲ್ಲ. ಹೀಗಾಗಿ ಏಕಸದಸ್ಯ ಪೀಠದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.
ಆರು ಕಡೆಗಳಲ್ಲಿ ಗಡಿ ವಿವಾದ ಬಗೆಹರಿಸಲು ಎರಡೂ ರಾಜ್ಯ ಸರ್ಕಾರಗಳು 2022ರ ಮಾರ್ಚ್‌ನಲ್ಲಿ ಎಂಯುಒಗೆ ಸಹಿ ಹಾಕಿದ್ದವು. ನಿರ್ಣಯ ಪ್ರಕ್ರಿಯೆ ಜುಲೈ 2021ರಲ್ಲಿ ಆರಂಭವಾಗಿತ್ತು. ಎರಡೂ ರಾಜ್ಯಗಳು ಗಡಿ ಬಿಕ್ಕಟ್ಟಿನ ಪ್ರದೇಶದಲ್ಲಿ ಭೂಮಿ ಬಿಟ್ಟುಕೊಡಲು ಒಪ್ಪಿದ್ದವು.
ಸಾಂವಿಧಾನಿಕವಾಗಿ ಸ್ಥಾಪನೆಯಾದ ಸ್ವಾಯತ್ತ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸದೆ ಸಾಕಷ್ಟು ಬುಡಕಟ್ಟು ಪ್ರದೇಶ ಮತ್ತು ಹಳ್ಳಿಗಳನ್ನು ಬಿಟ್ಟುಕೊಡಲಾಗಿದೆ ಎಂದು ಕೆಲವರು ಮೇಘಾಲಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳು ಮಾಡಿಕೊಂಡಿದ್ದ ಒಪ್ಪಂದದ ಅನುಸಾರ ಗಡಿರೇಖೆ ಮತ್ತು ಸ್ತಂಭಗಳ ನಿರ್ಮಾಣಕ್ಕೆ ಮೇಘಾಲಯ ಹೈಕೋರ್ಟ್ ಡಿಸೆಂಬರ್‌ನಲ್ಲಿ ತಡೆ ನೀಡಿತ್ತು.