ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ದೂರು ಪರಿಗಣನೆ: ಲೋಕಪಾಲ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ದೂರುಗಳನ್ನು ತಾನು ಪರಿಗಣಿಸಬಹುದು ಎಂದು ಲೋಕಪಾಲ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಸ್ವಯಂಪ್ರೇರಿತ ವಿಚಾರಣೆ ನಡೆಸಿತು.
Lokpal, Supreme Court
Lokpal, Supreme Court
Published on

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013 ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಬಹುದು ಎಂದು ಲೋಕಪಾಲ್ ಈಚೆಗೆ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಬಿ‌ ಆರ್ ಗವಾಯಿ , ಸೂರ್ಯಕಾಂತ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಲೋಕಪಾಲ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿದೆ.

Also Read
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮುಂದಿನ ಲೋಕಪಾಲ್‌ ಆಗುವ ಸಾಧ್ಯತೆ

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013 ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಬಹುದು ಎಂದು ಲೋಕಪಾಲ್ ತೀರ್ಪು ನೀಡಿದ  ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಸ್ವಯಂಪ್ರೇರಿತ ವಿಚಾರಣೆ ನಡೆಸಿತು. ಈ ಬಗೆಯ ತೀರ್ಪು ತೀರಾ ವಿಚಲಿತಗೊಳಿಸುವಂತಹ ಸಂಗತಿ ಎಂದು ನ್ಯಾ. ಗವಾಯಿ ಪ್ರತಿಕ್ರಿಯಿಸಿದರು.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ಬಹಳ ಮಹತ್ವದ್ದಾಗಿದೆ ಎಂದು ಪೀಠ ನುಡಿಯಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ಹೈಕೋರ್ಟ್ ನ್ಯಾಯಮೂರ್ತಿಗಳು ಎಂದಿಗೂ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಪ್ರತಿಯೊಬ್ಬ ನ್ಯಾಯಮೂರ್ತಿಯೂ ಹೈಕೋರ್ಟೇ ಆಗಿರುತ್ತಾರೆ ಎಂದು ಮೆಹ್ತಾ ಪ್ರತಿಪಾದಿಸಿದರು.

ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಮುಂದಾದರು. ಲೋಕಪಾಲ್‌ ತೀರ್ಪು ವಿಚಲಿತಗೊಳಿಸುವಂಥದ್ದು ಎಂದು ಅವರು ನುಡಿದರು.

ಲೋಕಪಾಲ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರುತ್ತಾ, " ಇದು ಅಪಾಯದಿಂದ ಕೂಡಿದೆ " ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಮತ್ತೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧದ ಎರಡು ದೂರುಗಳ ವಿಚಾರಣೆ ನಡೆಸಿದ್ದ ಲೋಕಪಾಲ್ ಜನವರಿ 27ರಂದು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ದೂರನ್ನು ವಿಚಾರಣೆಗೆ ಪರಿಗಣಿಸುವುದಾಗಿ ತೀರ್ಪು ನೀಡಿತ್ತು. ತನ್ನ ತೀರ್ಪು ಪ್ರಕಟಿಸುವ ಮುನ್ನ ಲೋಕಪಲ್ ಸಂಬಂಧ ಪಟ್ಟ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ಹೆಸರನ್ನು ಮಸುಕುಮಾಡಿತ್ತು.

ಈ ಆದೇಶದ ಮೂಲಕ ನಾವು ಅಂತಿಮವಾಗಿ ಏಕೈಕ ಸಮಸ್ಯೆಯೊಂದರ ಕುರಿತು ತೀರ್ಮಾನಕ್ಕೆ ಬಂದಿದ್ದೇವೆ- ಸಂಸತ್ತಿನ ಕಾಯಿದೆಯಿಂದ ಸ್ಥಾಪಿತವಾದ ಹೈಕೋರ್ಟ್‌ನ ನ್ಯಾಯಮೂರ್ತಿಗಳು 2013ರ ಕಾಯಿದೆಯ ಸೆಕ್ಷನ್ 14ರ ವ್ಯಾಪ್ತಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿದೆ. ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ. ಆದರೆ, ನಾವು ಆರೋಪಗಳ ಅರ್ಹತೆಯನ್ನು ಪರಿಶೀಲಿಸಿಲ್ಲ  ಎಂದು ಲೋಕಪಾಲ್ ತೀರ್ಪು ವಿವರಿಸಿತ್ತು. ಅದರಂತೆ ಲೋಕಪಾಲ್‌ಗೆ ಸಲ್ಲಿಕೆಯಾಗಿದ್ದ ದೂರುಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ವರ್ಗಾಯಿಸಲಾಗಿತ್ತು.

 ಜನವರಿ 27 ರಂದು, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಲೋಕಪಾಲ್ ಪೂರ್ಣ ಪೀಠ, ಹೈಕೋರ್ಟ್ ನ್ಯಾಯಮೂರ್ತಿಗಳು 'ಸಾರ್ವಜನಿಕ ಸೇವಕ' ಎಂಬ ವ್ಯಾಖ್ಯಾನದಡಿ ಬರುತ್ತಾರೆ. ಅಲ್ಲದೆ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದ- 2013 ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುವುದಿಲ್ಲ ಎಂದು ತೀರ್ಪು ನೀಡಿತ್ತು.

Also Read
ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ

ಆದರೆ, ಲೋಕಪಾಲ್ ಈ ವಿಷಯದ ಬಗ್ಗೆ ಮಾರ್ಗದರ್ಶನಕ್ಕಾಗಿ ಮೊದಲು ಸಿಜೆಐ ಅವರನ್ನು ಸಂಪರ್ಕಿಸಲು ನಿರ್ಧರಿಸಿತ್ತು.  ಹೀಗಾಗಿ ದೂರುಗಳಿಗೆ ಸಂಬಂಧಿಸದಂತೆ ಕೈಗೊಳ್ಳಬೇಕಾದ ಕ್ರಮವನ್ನು ಮುಂದೂಡಿತ್ತು.

ಲೋಕಪಾಲದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿಗೆ, ನ್ಯಾಯಮೂರ್ತಿಗಳ ಹೆಸರು ಮತ್ತು ದೂರಿನ ವಿಷಯಗಳನ್ನು ಬಹಿರಂಗಪಡಿಸದಂತೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 21ರಂದು ನಡೆಯುವ ಸಾಧ್ಯತೆಯಿದೆ.

Kannada Bar & Bench
kannada.barandbench.com