ಸಂರಕ್ಷಿತ ಅರಣ್ಯದ ಸುತ್ತ 1 ಕಿಮೀ ಪರಿಸರ-ಸೂಕ್ಷ್ಮ ವಲಯ: ಆದೇಶ ಮಾರ್ಪಡಿಸಿದ ಸುಪ್ರೀಂ ಕೋರ್ಟ್

ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹಾನಿಕಾರಕವಾದ ಅತಿರೇಕದ ಕಾಮಗಾರಿಗಳ ದುರುಪಯೋಗ ತಡೆಗಟ್ಟಲು ಈಗಿರುವ ಕಾನೂನಿನಲ್ಲೇ ಅಂತರ್ಗತ ರಕ್ಷಣೋಪಾಯಗಳಿವೆ ಎಂದು ಪೀಠ ಹೇಳಿತು.
Forest
Forest Image for representative purposes

ಸಂರಕ್ಷಿತ ಅರಣ್ಯದ ಸುತ್ತ 1 ಕಿಲೋಮೀಟರ್ ಪರಿಸರ-ಸೂಕ್ಷ್ಮ ವಲಯ (ಇಎಸ್‌ಜೆಡ್) ಇರಬೇಕೆಂದು ಕಡ್ಡಾಯಗೊಳಿಸುವ ತನ್ನ ಹಿಂದಿನ ಆದೇಶ ಈಗಾಗಲೇ ಅಭಿವೃದ್ಧಿ ಕರಡು ರೂಪಿಸಿರುವ ಅಥವಾ ಅಂತಿಮ ಅಧಿಸೂಚನೆ ಹೊರಡಿಸಿರುವ ಯೋಜನೆಗಳಿಗೆ ಅನ್ವಯಿಸದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶಿಸಿದ್ದು ಈ ಮೂಲಕ ಹಲವು ರಾಜ್ಯಗಳು ನಿಟ್ಟುಸಿರು ಬಿಡುವಂತಾಗಿದೆ [ಟಿ ಎನ್‌ ಗೋದಾವರ್ಮನ್‌ ತಿರುಮುಲ್ಪಾಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹಾನಿಕಾರಕವಾದ ಅತಿರೇಕದ ಕಾಮಗಾರಿಗಳ ದುರುಪಯೋಗ ತಡೆಗಟ್ಟಲು ಈಗಿರುವ ಕಾನೂನಿನಲ್ಲೇ ಅಂತರ್ಗತ ರಕ್ಷಣೋಪಾಯಗಳಿವೆ ಎಂದು ನ್ಯಾ. ಬಿ ಆರ್ ಗವಾಯಿ, ವಿಕ್ರಮ್ ನಾಥ್ ಹಾಗೂ ಸಂಜಯ್ ಕರೋಲ್ ಅವರಿದ್ದ ಪೀಠ ನುಡಿಯಿತು.

ಇಎಸ್‌ಝಡ್‌ಗಳನ್ನು ಘೋಷಿಸುವ ಗುರಿ ಜನರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸದೆ ಅರಣ್ಯಗಳನ್ನು ರಕ್ಷಿಸುವುದಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

"ದೇಶದ ನೂರಾರು ಹಳ್ಳಿಗಳು ಇಎಸ್‌ಝಡ್‌ ವ್ಯಾಪ್ತಿಯಲ್ಲಿವೆ. ಯಾವುದೇ ಉದ್ದೇಶಕ್ಕಾಗಿ ಶಾಶ್ವತ ನಿರ್ಮಾಣಕ್ಕೆ ಅನುಮತಿ ನೀಡದಿದ್ದರೆ, ತನ್ನ ಮನೆ ಪುನರ್‌ನಿರ್ಮಾಣ ಬಯಸುವ ಹಳ್ಳಿಗರಿಗೆ ಅನುಮತಿ ನೀಡಲಾಗದು. ಅಂತೆಯೇ, ಅವರ ಕುಟುಂಬ ಬೆಳೆದಿದ್ದು ದೊಡ್ಡ ಕುಟುಂಬಕ್ಕೆ ವಸತಿ ಕಲ್ಪಿಸಲು ಕೆಲ ಹೆಚ್ಚುವರಿ ನಿರ್ಮಾಣದ ಅಗತ್ಯವಿದ್ದು, ಅದಕ್ಕೂ ಅನುಮತಿ ನೀಡಲಾಗದು. ಅದೇ ರೀತಿ, ಸರ್ಕಾರ ಶಾಲೆ, ಔಷಧಾಲಯ, ಅಂಗನವಾಡಿ, ಅಂಗಡಿ, ನೀರಿನ ಟ್ಯಾಂಕ್‌ ಮತ್ತಿತರ ಮೂಲ ನಿರ್ಮಿತಿಗಳನ್ನು ಗ್ರಾಮಸ್ಥರ ಜೀವನ ಸುಧಾರಣೆಗಾಗಿ ನಿರ್ಮಿಸಲು ನಿರ್ಧರಿಸಿದರೆ ಅದಕ್ಕೂ ಸಹ ಅನುಮತಿ ನೀಡಲಾಗದು" ಎಂದು ನ್ಯಾಯಾಲಯ ವಿವರಿಸಿದೆ.

Also Read
ಕ್ರಿಮಿನಲ್‌ ಮಾನಹಾನಿ: ತಮ್ಮನ್ನು ದೋಷಿ ಎಂದಿರುವ ತೀರ್ಪಿಗೆ ತಡೆ ಕೋರಿ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ ರಾಹುಲ್‌


ಅರಣ್ಯ ಪ್ರದೇಶಗಳ ಒಂದು ಕಿಲೋಮಿಟರ್‌ ಸುತ್ತಮುತ್ತ ಇಎಸ್‌ಜಡ್‌ ವಲಯ ರೂಪಿಸಿ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ ಎಂದು 2022ರ ಜೂನ್‌ನಲ್ಲಿ ನೀಡಿದ್ದ ಸುಪ್ರೀಂ ಕೋರ್ಟ್‌ ಆದೇಶವನ್ನು ಈ ತೀರ್ಪು ಮಾರ್ಪಡಿಸಿತು.

ಆ ತೀರ್ಪಿನಲ್ಲಿ, ನ್ಯಾ. ಗವಾಯಿ ಅವರಿದ್ದ ಪೀಠ, ಅಂತಹ ವಲಯಗಳಲ್ಲಿ ಈಗಾಗಲೇ ನಡೆಯುತ್ತಿರುವ ಯಾವುದೇ ಕಾಮಗಾರಿಯನ್ನು ಸಂಬಂಧಪಟ್ಟ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಅನುಮತಿ ಪಡೆದ ನಂತರವೇ ಮುಂದುವರಿಸಬಹುದು ಎಂದು ಹೇಳಿತ್ತು.

ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳಿತ್ತು.

ಪ್ರಸ್ತುತ ತೀರ್ಪಿನಲ್ಲಿ ಈ ಅಂಶವನ್ನು ಉಳಿಸಿಕೊಳ್ಳಲಾಗಿದ್ದು ವನ್ಯಜೀವಿ ಅಭಯಾರಣ್ಯಗಳು ಮತ್ತು ಉದ್ಯಾನವನಗಳ ಸುತ್ತಲಿನ 1 ಕಿಮೀ ಪ್ರದೇಶಕ್ಕೆ ಈ ನಿಷೇಧವನ್ನು ವಿಸ್ತರಿಸುವ ಮೂಲಕ ಬಲಪಡಿಸಲಾಗಿದೆ.

ಇಎಸ್‌ಝಡ್‌ ಕುರಿತಾದ ನಿರ್ದೇಶನಗಳು ಅಂತರ-ರಾಜ್ಯ ಗಡಿಗಳಲ್ಲಿ ಮತ್ತು ಅಥವಾ ಸಾಮಾನ್ಯ ಗಡಿಗಳನ್ನು ಹಂಚಿಕೊಳ್ಳುವ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಿಗೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ಇಂದು ಸೇರಿಸಿದೆ.

ಅರಣ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮುಂದುವರಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆಯಬೇಕು ಎಂಬ ತನ್ನ ಈ ಹಿಂದಿನ ಆದೇಶದ ಕುರಿತಂತೆ ಪೀಠ “ಅಂತಹ ನಿರ್ದೇಶನವನ್ನು ಕಾರ್ಯಗತಗೊಳಿಸುವುದು ಅಸಾಧ್ಯವೆಂದು ಕಂಡುಕೊಂಡಿದ್ದೇವೆ. ಅಂತಹ ನಿರ್ದೇಶನವನ್ನು ಮುಂದುವರಿಸಿದರೆ, ಮನುಷ್ಯ-ಪ್ರಾಣಿ ಸಂಘರ್ಷವನ್ನು ತಪ್ಪಿಸುವ ಬದಲು, ಅದು ತೀವ್ರಗೊಳ್ಳಲು ಕಾರಣವಾಗುತ್ತದೆ ಎಂದು ಭಾವಿಸುತ್ತೇವೆ" ಎಂಬುದಾಗಿ ನ್ಯಾಯಾಲಯ ಹೇಳಿದೆ. ಈ ಸಂಬಂಧ ಮಾರ್ಪಾಡುಗೊಂಡ ಮಾರ್ಗಸೂಚಿಗಳನ್ನು ಅದು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
In_Re_TN_Godavarman_Thirumulpad.pdf
Preview

Related Stories

No stories found.
Kannada Bar & Bench
kannada.barandbench.com