ಬೀದಿ ನಾಯಿ ತೆರವು ವಿವಾದ: ಆದೇಶ ಕಾಯ್ದಿರಿಸಿದ ಸುಪ್ರೀಂ; ಸದ್ಯಕ್ಕಿಲ್ಲ ತಡೆಯಾಜ್ಞೆ

ಆಗಸ್ಟ್ 11ರಂದು ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿದ್ದ ವಿವಿಧ ಕಕ್ಷಿದಾರರ ಪರವಾಗಿ ಹಲವು ಹಿರಿಯ ವಕೀಲರು ವಿಚಾರಣೆ ವೇಳೆ ಹಾಜರಿದ್ದರು.
Supreme Court, Stray Dogs
Supreme Court, Stray Dogs
Published on

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ತಾನು ಆಗಸ್ಟ್‌ 11ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ಪುರಸಭೆ ಅಧಿಕಾರಿಗಳಿಗೆ ಹೊರಡಿಸಲಾದ ನಿರ್ದೇಶನಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತಡೆಯಾಜ್ಞೆ ನೀಡಲಿಲ್ಲ.

Also Read
ಬೀದಿ ನಾಯಿ ಮುಕ್ತ ದೆಹಲಿ: "ಪ್ರಾಣಿ ಹಕ್ಕು ಹೋರಾಟಗಾರರು ರೇಬಿಸ್‌ಗೆ ಬಲಿಯಾದವರ ಜೀವ ಮರಳಿಸುತ್ತಾರೆಯೇ?" ಸುಪ್ರೀಂ ಕಿಡಿ

ಇಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನಾಯಿ ಕಡಿತ ಮತ್ತು ರೇಬಿಸ್‌ ತಡೆಯುವುದಕ್ಕಾಗಿ ಸಾಮೂಹಿಕವಾಗಿ ಬೀದಿನಾಯಿಗಳನ್ನು ಸ್ಥಳಾಂತರಿಸುವುದು ಅಗತ್ಯ ಎಂದರು.

“ಪ್ರಜಾಪ್ರಭುತ್ವದಲ್ಲಿ ಒಂದೆಡೆ ಧ್ವನಿ ಬಹುಮತವಿರುತ್ತದೆ (ಕಡಿಮೆ ಸಂಖ್ಯೆಯ ಆದರೆ ಪ್ರಬಲವಾಗಿ ಅಭಿಪ್ರಾಯಗಳನ್ನು ಮಂಡಿಸುವ ಗುಂಪು) ಮತ್ತೊಂದೆಡೆ ಮೌನವಾಗಿಯೇ ನೋವು ಅನುಭವಿಸುವವರಿರುತ್ತಾರೆ. ಕೋಳಿ, ಮೊಟ್ಟೆ ಇತ್ಯಾದಿಗಳನ್ನು ತಿಂದು ನಂತರ ತಾವು ಪ್ರಾಣಿಪ್ರಿಯರು ಎಂದು ಹೇಳಿಕೊಳ್ಳುವವರ ವಿಡಿಯೋಗಳನ್ನು ಕಂಡಿದ್ದೇವೆ. ಇದು ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಯಾಗಿದೆ. ಮಕ್ಕಳು ಸಾಯುತ್ತಿದ್ದಾರೆ. ಸಂತಾನಹರಣವಾಗಲಿ, ಲಸಿಕೆಯಾಗಲೀ ರೇಬಿಸ್‌ ತಡೆಯುವುದಿಲ್ಲ” ಎಂದರು.

ಮುಂದುವರೆದು,"ವಿಶ್ವ ಆರೋಗ್ಯ ಸಂಸ್ಥೆ ದತ್ತಾಂಶದ ಪ್ರಕಾರ ವರ್ಷಕ್ಕೆ 305 ಸಾವುಗಳು (ನಾಯಿ ಕಡಿತದಿಂದ) ಸಂಭವಿಸುತ್ತಿವೆ. ಹೆಚ್ಚಿನ ಮಕ್ಕಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಯಾರೂ ಪ್ರಾಣಿ ದ್ವೇಷಿಗಳಲ್ಲ... ನಾಯಿಗಳನ್ನು ಕೊಲ್ಲಬೇಕಾಗಿಲ್ಲ... ಅವುಗಳನ್ನು ಸ್ಥಳಾಂತರಿಸಬೇಕು. ಪೋಷಕರು ಮಕ್ಕಳನ್ನು ಆಟವಾಡಲು ಕಳುಹಿಸದಂತಾಗಿದೆ. ಪುಟ್ಟ ಬಾಲೆಯರು ಗಾಯಗೊಂಡಿದ್ದಾರೆ" ಎಂದರು.

ಈಗ ಇರುವ ನಿಯಮಗಳಿಂದ ಯಾವುದೇ ಪ್ರಯೋಜನ ಇಲ್ಲ ಎಂದ ಅವರು "ನ್ಯಾಯಾಲಯ ಮಧ್ಯಪ್ರವೇಶಿಸಬೇಕು... ಇದು ಮಾತನಾಡುವ ಕೆಲವೇ ಮಂದಿ ಮತ್ತು ಬಾಯಿಲ್ಲದ ಅಸಂಖ್ಯಾತರ ನಡುವಿನ ವಿಚಾರವಾಗಿದೆ ಎಂದು ಬಣ್ಣಿಸಿದರು.

 ಪ್ರಾಜೆಕ್ಟ್ ಕೈಂಡ್ನೆಸ್ ಎಂಬ ಎನ್‌ಜಿಒ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆಗಸ್ಟ್ 11ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು.

ಕಾನೂನು ಜಾರಿಯಲ್ಲಿದ್ದರೂ ಅವುಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದು ಎಸ್‌ ಜಿ ಹೇಳುತ್ತಿರುವುದನ್ನು ಕೇಳುತ್ತಿರುವುದು ಇದೇ ಮೊದಲು. ಆದೇಶವನ್ನು ಪಾಲಿಸಬೇಕಾದವರು ಯಾರು ಎಂಬುದು ಪ್ರಶ್ನೆ. ಪುರಸಭೆಗಳು ಶ್ವಾನ ಆಶ್ರಯ ತಾಣಗಳನ್ನು ನಿರ್ಮಿಸಿಲ್ಲ, ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡುತ್ತಿಲ್ಲ. ಅದಕ್ಕಾಗಿ ಮೀಸಲಿಟ್ಟ ಹಣವನ್ನು ಕಬಳಿಸಲಾಗಿದೆ. ಇಂತಹ ಆದೇಶಗಳು ಸ್ವಯಂಪ್ರೇರಿತವಾಗಿವೆ. ಯಾವುದೇ ನೋಟಿಸ್‌ ನೀಡಿಲ್ಲ. ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಹಾಕಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯಾದರೂ ಅಂತಹ ಆಶ್ರಯ ಕೇಂದ್ರಗಳೇ ಅಸ್ತಿತ್ವದಲ್ಲಿಲ್ಲ. ಅಂತಹ ಕೇಂದ್ರಗಳನ್ನು 8 ವಾರದೊಳಗೆ ನಿರ್ಮಿಸಿ ಎಂದು ಹೇಳಲಾಗಿದೆ. ಸಂತಾನಹರಣ ಚಿಕಿತ್ಸೆ ಬಳಿಕ ಅವುಗಳನ್ನು ಎಲ್ಲಿಗೆ ಕಳಿಸಬೇಕು? ಆದೇಶಕ್ಕೆ ತಡೆ ನೀಡಬೇಕು. ಇಂತಹ ಆದೇಶ ನೀಡಿದರೆ ನಾಯಿಗಳನ್ನು ಕೊಲ್ಲಲಾಗುತ್ತದೆ. ನಾಯಿಗಳನ್ನು ಒಟ್ಟಿಗೇ ಇರಿಸಿ ಊಟ ಎಸೆಯಲಾಗುತ್ತದೆ ಅವುಗಳು ಪರಸ್ಪರ ದಾಳಿ ಮಾಡಿಕೊಳ್ಳುತ್ತವೆ. ಇದಕ್ಕೆಲ್ಲಾ ಅನುಮತಿ ನೀಡಬಾರದು ಎಂದರು.

ಮತ್ತೊಬ್ಬ ಕಕ್ಷಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಆಗಸ್ಟ್ 11 ರ ಆದೇಶವನ್ನು ಬೇರೆ ರಾಜ್ಯ ಸರ್ಕಾರಗಳು ಹೈಕೋರ್ಟ್‌ಗಳು ಅನುಸರಿಸುತ್ತಿವೆ ಎಂದು ಗಮನ ಸೆಳೆದರು.

ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿ ನಾಯಿಗಳಿಗೆ ಆಶ್ರಯ ನೀಡುವುದಕ್ಕೆ ಮೂಲಸೌಕರ್ಯ ಕೊರತೆ ಇದೆ. ಸುಪ್ರೀಂ ಕೋರ್ಟ್‌ ನೀಡಿದ 1, 3 ಮತ್ತು 4ನೇ ನಿರ್ದೇಶನಗಳನ್ನು ತಡೆ ಹಿಡಿಯಬೇಕಿದೆ. ಎಸ್‌ ಜಿ ಮೆಹ್ತಾ ಪೂರ್ವಾಗ್ರಹ ಪೀಡಿತರಾಗಿ ವಾದ ಮಂಡಿಸುತ್ತಿದ್ದಾರೆ. ನಾಯಿ ಕಡಿತ ಪ್ರಕರಣಗಳು ಇರಬಹುದಾದರೂ ಸಂಸತ್‌ ಹೇಳಿರುವಂತೆ ದೆಹಲಿಯಲ್ಲಿ ರೇಬಿಸ್‌ನಿಂದಾದ ಸಾವು ಶೂನ್ಯ. ನಾಯಿಗಳು ಕಡಿಯುವುದು ಕೆಟ್ಟದ್ದೇ ಹಾಗೆಂದು ಸುಪ್ರೀಂ ಕೋರ್ಟ್‌ ಇಂತಹ ಭಯಾನಕ ಸನ್ನಿವೇಶ ಸೃಷ್ಟಿಸಬಾರದು ಎಂದರು.

Also Read
ಬೀದಿ ನಾಯಿ ಮತ್ತು ಬೀಡಾಡಿ ಪ್ರಾಣಿ ಮುಕ್ತ ನಗರಗಳಿಗಾಗಿ ವಿಶೇಷ ಅಭಿಯಾನ: ರಾಜಸ್ಥಾನ ಹೈಕೋರ್ಟ್ ಆದೇಶ

ಹಿರಿಯ ವಕೀಲರಾದ ಸಿದ್ಧಾರ್ಥ ದವೆ,  ಅಮನ್ ಲೇಖಿ ಮತ್ತು ಕಾಲಿನ್ ಗೊನ್ಸಾಲ್ವೆಸ್ ಕೂಡ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

 ಈ ಹಂತದಲ್ಲಿ ನ್ಯಾ. ನಾಥ್‌ ಅವರು "ಸಂಸತ್ತು ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುತ್ತದೆ... ಆದರೆ ಜಾರಿಗೆ ತರಲಾಗಿಲ್ಲ. ಒಂದೆಡೆ, ಮನುಷ್ಯರು ಬಳಲುತ್ತಿದ್ದಾರೆ ಮತ್ತೊಂದೆಡೆ, ಪ್ರಾಣಿ ಪ್ರಿಯರೂ ಇಲ್ಲಿದ್ದಾರೆ. ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕಿದೆ... ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದವರೆಲ್ಲರೂ ಅಫಿಡವಿಟ್‌ಗಳನ್ನು ಸಲ್ಲಿಸಬೇಕು ಮತ್ತು ಪುರಾವೆಗಳನ್ನು ಒದಗಿಸಬೇಕು" ಎಂದು ನ್ಯಾಯಾಲಯ ನುಡಿಯಿತು.  ಅಂತೆಯೇ ಮಧ್ಯಂತರ ಪರಿಹಾರವಾಗಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿತು.

Kannada Bar & Bench
kannada.barandbench.com