

ಭಾರತದಲ್ಲಿ ಆಸ್ತಿ ವ್ಯವಹಾರಗಳ ದಾಖಲಾತಿ ಮತ್ತು ಪರಿಶೀಲನೆ ವಿಧಾನದಲ್ಲಿ ಮೂಲಭೂತ ಬದಲಾವಣೆ ತರಬಹುದಾದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದೆ [ಸಮೀವುಲ್ಲಾ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ]
ಆಸ್ತಿ ನೋಂದಣಿ ವ್ಯವಸ್ಥೆಯನ್ನು ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಪುನರ್‌ರಚನೆ ಮಾಡುವ ಸಾಧ್ಯತೆ ಹಾಗೂ ಆಸ್ತಿಯ ಪ್ರಶ್ನಾತೀತ ಮಾಲೀಕತ್ವ ವ್ಯವಸ್ಥೆಯತ್ತ ಸಾಗುವ ಮಾರ್ಗ ಅಧ್ಯಯನ ಮಾಡಿ ರೂಪುರೇಷೆ ರಚಿಸುವಂತೆ ಕಾನೂನು ಆಯೋಗಕ್ಕೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಸೂಚಿಸಿತು.
ಆಸ್ತಿ ಮಾರಾಟ ಮತ್ತು ಖರೀದಿಯನ್ನು ಸರಳಗೊಳಿಸುವ ಮತ್ತು ಭಾರತದ ಕಾನೂನುಗಳನ್ನು ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಹೊಂದಿಸುವ ಸಮಯ ಬಂದಿದೆ ಎಂದು ನ್ಯಾಯಾಲಯ ಹೇಳಿತು.
ಈ ಪ್ರಕ್ರಿಯೆಗೆ ಅಸ್ತಿತ್ವದಲ್ಲಿರುವ ಕಾನೂನುಗಳ ಮರುರಚನೆ ಮತ್ತು ಪರಿಶೀಲನೆ ಅಗತ್ಯವಾಗಬಹುದು ಮತ್ತು ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳಡವಿಸಲು ಹೊಸ ಕಾನೂನು ಜಾರಿಗೆ ತರಬೇಕಾಗಬಹುದು ಎಂದು ನ್ಯಾಯಾಲಯ ನುಡಿಯಿತು.
ಕೇಂದ್ರ, ರಾಜ್ಯಗಳು ಮತ್ತು ಮಾಹಿತಿ ಮತ್ತು ತಂತ್ರಜ್ಞಾನದ ತಜ್ಞರನ್ನು ಸಂಪರ್ಕಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಭಾರತದಲ್ಲಿ ಇಂದಿನ ಆಸ್ತಿ ನೋಂದಣಿ ವ್ಯವಸ್ಥೆ, ನೋಂದಣಿಯು ಕಾನೂನಾತ್ಮಕ ಮಾಲೀಕತ್ವವನ್ನು ಒದಗಿಸದೆ ಕೇವಲ ಒಂದು ಒಪ್ಪಂದವನ್ನು ಸಾರ್ವಜನಿಕವಾಗಿ ದಾಖಲೆಗೊಳಿಸುತ್ತದೆಯಷ್ಟೇ. ಖರೀದಿದಾರರು ವ್ಯಾಪಕವಾಗಿ ಆಸ್ತಿ ಒಡೆತನದ ಶೋಧ ನಡೆಸಬೇಕಾಗುವುದರಿಂದ ಅವರ ಮೇಲೆ ಭಾರಿ ಹೊರೆ ಬೀಳುತ್ತದೆ ಎಂದು ಅದು ಹೇಳಿದೆ.
ಈ ಕಾರಣಕ್ಕಾಗಿಯೇ ಭಾರೀ ಪ್ರಮಾಣದಲ್ಲಿ ಆಸ್ತಿ ವ್ಯಾಜ್ಯಗಳು ದಾಖಲಾಗುತ್ತಿದ್ದು, ಭಾರತದ ಸಿವಿಲ್ ದಾವೆಗಳಲ್ಲಿ ಶೇ 66% ಭಾಗ ಆಸ್ತಿ ವ್ಯಾಜ್ಯಗಳಿಗೆ ಸಂಭವಿಸಿರುವುದೇ ಅಗಿದೆ ಎಂದು ನ್ಯಾಯಾಲಯ ಆಸ್ತಿ ಮಾಲೀಕತ್ವವನ್ನು ಸ್ಪಷ್ಟವಾಗಿ, ಶಾಶ್ವತವಾಗಿ ಮತ್ತು ವಾದಾತೀತವಾಗಿ ನಿರ್ವಹಿಸಲು ಪ್ರಶ್ನಾತೀತ ಭೂ ಮಾಲೀಕತ್ವ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ನುಡಿಯಿತು.
ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ರೂಪಿಸಲಾದ ದಾಖಲೆಗಳನ್ನು ಬದಲಿಸಲು ಸಾಧ್ಯವಿಲ್ಲ.ಜೊತೆಗೆ ಮಾಹಿತಿ ಪಾರದರ್ಶಕವಾಗಿರುತ್ತದೆ. ಆಸ್ತಿ ವರ್ಗಾವಣೆಯಾಗಿರುವ ಇತಿಹಾಸವನ್ನು ಸ್ಪಷ್ಟವಾಗಿ ಪತ್ತೆಹಚ್ಚಬಹುದಾಗಿದೆ ಇದರಿಂದಾಗಿ ನೋಂದಣಿ, ನಕ್ಷೆಗಳು, ರೆವೆನ್ಯೂ ದಾಖಲೆ, ಮಾಲೀಕತ್ವ ವರ್ಗಾವಣೆ ಎಲ್ಲವನ್ನೂ ಏಕೀಕೃತ ಡಿಜಿಟಲ್‌ವ್ಯವಸ್ಥೆಗೆ ಸೇರ್ಪಡೆ ಮಾಡಬಹುದು ಎಂದು ಅದು ಹೇಳಿತು.
ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪ್ರಶ್ನಾತೀತ ಮಾಲೀಕತ್ವದೊದಿಗೆ ಸಂಯೋಜಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತು.
ಮೇಲ್ಮನವಿದಾರರ ಪರವಾಗಿ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಮತ್ತು ವಕೀಲ ಎ ವೇಲನ್ ವಾದ ಮಂಡಿಸಿದರು. ಬಿಹಾರ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ಮತ್ತವರ ತಂಡ ವಾದ ಮಂಡಿಸಿತು.