ಕ್ಷಮಾದಾನ, ಮರಣದಂಡನೆ ವಿಳಂಬ: ಮಾರ್ಗಸೂಚಿ ಅಗತ್ಯತೆ ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್

ಪುಣೆಯಲ್ಲಿ 2007ರಲ್ಲಿ ನಡೆದಿದ್ದ ಬಿಪಿಒ ಮಹಿಳಾ ಉದ್ಯೋಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆ ಮಾರ್ಪಡಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
Supreme Court, Death Penalty
Supreme Court, Death Penalty
Published on

ಮರಣದಂಡನೆ ವಿಧಿಸುವಲ್ಲಿ ಉಂಟಾಗುವ ಅನಿರ್ದಿಷ್ಟ ವಿಳಂಬ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ ಮೇಲೆ ಉಂಟು ಮಾಡುವ ಘಾಸಿಯ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ಕಳವಳ ವ್ಯಕ್ತಪಡಿಸಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಪ್ರದೀಪ್‌ ಯಶವಂತ ಕೊಕಡೆ ಇನ್ನಿತರರ ನಡುವಣ ಪ್ರಕರಣ].

 ಇಂತಹ ವಿಳಂಬ ತಲೆಯ ಮೇಲೆ ನೇತಾಡುವ ತೂಗುಗತ್ತಿಯಂತಿದ್ದು ಅದು ಯಾವಾಗ ಬೇಕಾದರೂ ಬೀಳುವಂತಹ ಸ್ಥಿತಿ ನಿರ್ಮಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಓಕಾ,  ಅಹ್ಸಾನುದ್ದೀನ್‌ ಅಮಾನುಲ್ಲಾ ಹಾಗೂ ಆಗಸ್ಟಿನ್‌ ಜಾರ್ಜ್‌ ಮಾಸಿಹ್‌ ಅವರಿದ್ದ ಪೀಠ ತಿಳಿಸಿದೆ.

Also Read
ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ: ಅಪರಾಜಿತಾ ಮಸೂದೆ ಅಂಗೀಕರಿಸಿದ ಪಶ್ಚಿಮ ಬಂಗಾಳ ವಿಧಾನಸಭೆ

ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದ ಪ್ರಕರಣಗಳಲ್ಲಿ ಅಪರಾಧಿ  ಕ್ಷಮಾದಾನ ಅರ್ಜಿ ಸಲ್ಲಿಸುವ ಸೆಷನ್ಸ್‌ ನ್ಯಾಯಾಲಯಗಳಲ್ಲಿ ಪಾಲಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಇಂತಹ ವಿಳಂಬ ಉಂಟಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಸಮಸ್ಯೆ ಪರಿಹರಿಸಲು ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ಆದೇಶ ಜಾರಿಗೊಳಿಸಲು ಅನುವು ಮಾಡಿಕೊಡುವ ಸಿಆರ್‌ಪಿಸಿ ಸೆಕ್ಷನ್‌ 413 ಮತ್ತು 414ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 453 ಮತ್ತು 454 ಪರಿಣಾಮ ಬೀರಲು ಮಾರ್ಗಸೂಚಿ ರೂಪಿಸುವಂತೆ ಪೀಠ ಸೂಚಿಸಿದೆ.

ಪುಣೆಯಲ್ಲಿ 2007ರಲ್ಲಿ ನಡೆದಿದ್ದ ಬಿಪಿಒ ಮಹಿಳಾ ಉದ್ಯೋಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಪುರುಷೋತ್ತಮ್ ಬೋರಾಟೆ ಮತ್ತು ಪ್ರದೀಪ್ ಕೊಕಡೆಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದ್ದ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ 2019ರಲ್ಲಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.

ವಿಳಂಬ ಅಸಾಂವಿಧಾನಿಕ ಮತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎಂದು ಅಪರಾಧಿಗಳ ಪರ ವಕೀಲರು ವಾದಿಸಿದರು.

 ಆಗ ನ್ಯಾಯಾಲಯ, ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಪೂರ್ವಭಾವಿಯಾಗಿ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಲು ವಿಫಲವಾದರೆ ಮರಣದಂಡನೆ ಜಾರಿ ಮತ್ತಷ್ಟು ವಿಳಂಬವಾಗುತ್ತದೆ ಎಂದಿತು.

Also Read
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಸಿಪಿಎಂ ಮಾಜಿ ಮುಖಂಡನಿಗೆ ಮರಣದಂಡನೆ ಬದಲು 10 ವರ್ಷಗಳ ಕಠಿಣ ಸಜೆ

ಮರಣದಂಡನೆ ಜಾರಿಗೊಳಿಸುವಲ್ಲಿ ಯಾವುದೇ ಅನಿರ್ದಿಷ್ಟ ವಿಳಂಬವಾಗದಂತೆ ನೋಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಈ ಹಂತದಲ್ಲಿ ನ್ಯಾಯಾಲಯ ಆಲೋಚಿಸಿತು.

ರಾಜ್ಯಪಾಲರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಮರಣದಂಡನೆಯನ್ನು ಜಾರಿಗೊಳಿಸಲು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ಪ್ರಭುತ್ವ ಸಕ್ರಿಯವಾಗಿರಬೇಕು  ಎಂದ ಪೀಠ ಅಂತಿಮವಾಗಿ ತೀರ್ಪು ಕಾಯ್ದಿರಿಸಿತು.

Kannada Bar & Bench
kannada.barandbench.com