ಹೈಕೋರ್ಟ್‌ ಅನುಮತಿ ಪಡೆಯದೆ ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ಹಿಂಪಡೆಯುವಂತಿಲ್ಲ: ಸುಪ್ರೀಂ ಕೋರ್ಟ್‌

ಮುಂದಿನ ಆದೇಶದವರೆಗೆ ಅಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಸೇವೆಯಲ್ಲಿ ಮುಂದುವರೆಯಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್‌.
Supreme Court
Supreme Court

ಸಂಸತ್‌ ಸದಸ್ಯರು ಮತ್ತು ಶಾಸಕರ ವಿರುದ್ದದ ಕ್ರಿಮಿನಲ್‌ ಪ್ರಕರಣಗಳನ್ನು ಸಂಬಂಧಪಟ್ಟ ಹೈಕೋರ್ಟ್‌ಗಳ ಅನುಮತಿ ಪಡೆಯದೇ ಹಿಂಪಡೆಯುವಂತಿಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಮಾಡಿದೆ.

ಅಮಿಕಸ್‌ ಕ್ಯೂರಿ ಹಾಗೂ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರ ಸಲಹೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ವಿನೀತ್‌ ಶರಣ್‌ ಅವರಿದ್ದ ತ್ರಿಸದಸ್ಯ ಪೀಠವು ಒಪ್ಪಿಕೊಂಡಿದೆ.

“ಕೇರಳ ಸರ್ಕಾರ ವರ್ಸಸ್‌ ಕೆ ಅಜಿತ್‌ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ 2020ರ ಸೆಪ್ಟೆಂಬರ್‌ 16ರಿಂದ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಹೈಕೋರ್ಟ್‌ಗಳು ಪರಿಶೀಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಮತ್ತು ಈ ಸಂಬಂಧ ಈಗಾಗಲೇ ತೀರ್ಪು ಹೊರಡಿಸಿರುವ ನ್ಯಾಯಾಮೂರ್ತಿಗಳ ಪಟ್ಟಿ ನೀಡುವಂತೆ ಹೈಕೋರ್ಟ್‌ಗಳ ಎಲ್ಲಾ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಾಲಯ ಆದೇಶ ಮಾಡಿದೆ. ಮುಂದಿನ ಆದೇಶದವರೆಗೆ ಈಗ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಧೀಶರು, ವಿಶೇಷ ನ್ಯಾಯಾಲಯಗಳ ನ್ಯಾಯಾಧೀಶರು ಅದನ್ನು ಮುಂದುವರೆಸಬೇಕು ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಅಮಿಕಸ್‌ ಕ್ಯೂರಿ ವಿಜಯ್‌ ಹನ್ಸಾರಿಯಾ ಅವರು ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಯ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ ಹಿಂಪಡೆಯುವ ಸಂಬಂಧ ಹೈಕೋರ್ಟ್‌ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಸಲಹೆ ಮಾಡಿದರು.

2018ರ ಡಿಸೆಂಬರ್‌ ಅಂತ್ಯದ ವರೆಗೆ ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ 4,122 ಪ್ರಕರಣಗಳು ಬಾಕಿ ಇವೆ. 2020ರ ಸೆಪ್ಟೆಂಬರ್‌ ವೇಳೆಗೆ ಇದು 4,859ಕ್ಕೆ ಏರಿಕೆಯಾಗಿದ್ದು, ಎರಡು ವರ್ಷಗಳಲ್ಲಿ ಶೇ. 17ರಷ್ಟು ಪ್ರಕರಣಗಳು ಏರಿಕೆಯಾಗಿವೆ ಎಂದು ವಕೀಲೆ ಸ್ನೇಹ ಕಲಿತಾ ಅವರೊಡಗೂಡಿ ತಯಾರಿಸಿರುವ ಅಮಿಕಸ್‌ ಕ್ಯೂರಿ ವರದಿ ಹೇಳಿದೆ.

ಕಳೆದ ವರ್ಷದ ಸೆಪ್ಟೆಂಬರ್‌ 16, ಅಕ್ಟೋಬರ್‌ 6 ಮತ್ತು ನವೆಂಬರ್‌ 4ರ ತನ್ನ ಆದೇಶದಲ್ಲಿ ನ್ಯಾಯಾಲಯವು ಸಿಬಿಐ ಒಳಗೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ತಾವು ನಡೆಸುತ್ತಿರುವ ಬಾಕಿ ಉಳಿದಿರುವ ಪ್ರಕರಣಗಳ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿದೆ. ನ್ಯಾಯಾಲಯ ನಿರಂತರವಾಗಿ ಆದೇಶ ಮಾಡಿದರೂ ಕೇಂದ್ರ ಸರ್ಕಾರವು ಪೀಠದ ಆದೇಶವನ್ನು ಪರಿಪಾಲನೆ ಮಾಡಿಲ್ಲ ಎಂದು ಹನ್ಸಾರಿಯಾ ವಿವರಿಸಿದ್ದಾರೆ.

ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ತಮ್ಮ ಪಕ್ಷದ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಆಡಳಿತರೂಢ ಪಕ್ಷಗಳ ರಾಜ್ಯ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಅಮಿಕಸ್‌ ಕ್ಯೂರಿ ಹೇಳಿದ್ದಾರೆ. ಮುಜಾಫರ್ ನಗರ ಗಲಭೆ, ಸಂಗೀತ್‌ ಸೋಮ್‌, ಕಪೀಲ್‌ ದೇವ್‌, ಸುರೇಶ್‌ ರಾಣಾ ಮತ್ತು ಸಾಧ್ವಿ ಪ್ರಾಚಿ ಸೇರಿದಂತೆ ಹಲವರ ವಿರುದ್ಧದ 76 ಪ್ರಕರಣಗಳನ್ನು ಉತ್ತರ ಪ್ರದೇಶ ಸರ್ಕಾರವು ಹಿಂಪಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ತನ್ನ ಅಧಿಕಾರ ಬಳಸಿ ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ದೂರಿಗೆ ಅಂತ್ಯ ಹಾಡಲು ರಾಜ್ಯ ಸರ್ಕಾರಗಳು ಪ್ರಯತ್ನಿಸಿರುವ ನಾಲ್ಕು ಉದಾಹರಣೆಗಳನ್ನು ವರದಿಯಲ್ಲಿ ವಿವರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಸರ್ಕಾರಿ ಅಭಿಯೋಜಕರು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸದರಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಾಸಿಕ್ಯೂಷನ್‌ ಹಿಂಪಡೆಯುವ ಕುರಿತು ಮನವಿ ಸಲ್ಲಿಸಬೇಕು. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಅನುಮತಿಸಿದರೆ ಆರೋಪಿಯು ನಿರ್ದಿಷ್ಟ ಪ್ರಕರಣದಲ್ಲಿ ಖುಲಾಸೆಯಾಗುತ್ತಾರೆ.

Also Read
ದೇಶದೆಲ್ಲೆಡೆ ಸಂಸದರು, ಶಾಸಕರ ವಿರುದ್ಧ 4442 ಪ್ರಕರಣಗಳು ಬಾಕಿ: ಸುಪ್ರೀಂಗೆ ಅಮಿಕಸ್ ಕ್ಯೂರಿ ಮಾಹಿತಿ

“ಹೈಕೋರ್ಟ್‌ ಅನುಮತಿ ಪಡೆಯದೆ ಯಾವುದೇ ಸಂಸದರ ಅಥವಾ ಶಾಸಕರ (ಮೇಲ್ಮನವಿ ಮತ್ತು ಕೆಳಮನೆ ಸದಸ್ಯರು) ವಿರುದ್ಧದ ಪ್ರಾಸಿಕ್ಯೂಷನ್‌ ಹಿಂಪಡೆಯುವಂತಿಲ್ಲ ಎಂದು ಈ ನ್ಯಾಯಾಲಯ ಆದೇಶ ಮಾಡಬೇಕು” ಎಂದು ಹನ್ಸಾರಿಯಾ ಕೋರಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಪ್ರಾಸಿಕ್ಯೂಷನ್‌ ಹಿಂಪಡೆಯುವ ಸಂಬಂಧ ಕೇರಳ ಸರ್ಕಾರ ವರ್ಸಸ್‌ ಕೆ ಅಜಿತ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೆಲವು ನಿರ್ದೇಶನಗಳನ್ನು ನೀಡಿದೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ ಹಿಂಪಡೆಯುವಾಗ ಈ ನಿರ್ದೇಶನಗಳನ್ನು ಹೈಕೋರ್ಟ್‌ಗಳು ಪರಿಗಣಿಸಬೇಕು ಎಂದು ಹನ್ಸಾರಿಯಾ ಹೇಳಿದ್ದಾರೆ. 2015ರಲ್ಲಿ ಕೇರಳ ವಿಧಾನಸಭೆಯಲ್ಲಿ ಹಾಲಿ ಆಡಳಿತರೂಢ ಪಕ್ಷದ ಆರು ಸದಸ್ಯರು ಸೃಷ್ಟಿಸಿದ್ದ ದಾಂಧಲೆ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಇದನ್ನು ಹಿಂಪಡೆಯುವ ಸಂಬಂಧ ಸಲ್ಲಿಸಿದ್ದ ಮೇಲ್ಮವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠವು ಮಹತ್ವದ ತೀರ್ಪು ಪ್ರಕಟಿಸಿತ್ತು.

Related Stories

No stories found.
Kannada Bar & Bench
kannada.barandbench.com