ಮೂರು ಕೋಟಿ ಆಧಾರ್ ಕಾರ್ಡ್ ರದ್ದತಿ ಗಂಭೀರ ವಿಷಯ: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ

ವಾದ ಆಲಿಸಿದ ಬಳಿಕ ನ್ಯಾ. ಬೊಬ್ಡೆ ಅವರು ಇದು ಗಂಭೀರ ವಿಷಯವಾಗಿದ್ದು ನಾಲ್ಕು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಇದನ್ನು ನೀವು ಪ್ರತಿಕೂಲಾತ್ಮಕ ಎಂದು ಭಾವಿಸಬಾರದು ಎಂದರು.
Supreme Court, Aadhaar
Supreme Court, Aadhaar
Published on

ಪಡಿತರ ನಿರಾಕರಣೆಯಿಂದಾಗಿ ಹಸಿವಿನಿಂದ ಮರಣ ಸಂಭವಿಸುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಮೂರು ಕೋಟಿ ಆಧಾರ್‌ ಕಾರ್ಡ್‌ಗಳನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ಸುಪ್ರೀಂಕೋರ್ಟ್‌ ಬುಧವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಆರಂಭದಲ್ಲಿ ಮನವಿ ಪುರಸ್ಕರಿಸಲು ಒಪ್ಪದೇ ಸಂಬಂಧಪಟ್ಟ ಹೈಕೋರ್ಟ್‌ಗಳು ಪ್ರಕರಣ ಆಲಿಸಬಹುದೆಂದು ತಿಳಿಸಿತು. ಆದರೆ ಅರ್ಜಿದಾರರಾದ ಕೊಯಿಲಿ ದೇವಿ ಅವರ ಪರ ವಕೀಲ ಕಾಲಿನ್ ಗೊನ್ಸಾಲ್ವೆಸ್ ಕೇಂದ್ರ ಮಟ್ಟದಲ್ಲಿ ಆಧಾರ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

"ಕೇಂದ್ರ ಮಟ್ಟದಲ್ಲಿ 3 ಕೋಟಿಗೂ ಹೆಚ್ಚು ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಪ್ರತಿ ರಾಜ್ಯದಲ್ಲಿ 10 ರಿಂದ 15 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ಬೆರಳಚ್ಚು ಅಥವಾ ಐರಿಸ್ ಸ್ಕ್ಯಾನರ್ ಕಾರ್ಯನಿರ್ವಹಿಸದ ಸಂದರ್ಭಗಳಿವೆ" ಎಂದು ಗೊನ್ಸಾಲ್ವೆಸ್ ವಿವರಿಸಿದರು.

Also Read
ಅಕ್ರಮವಾಗಿ ಆಧಾರ್ ಮಾಹಿತಿ ಶೇಖರಿಸುತ್ತಿರುವ ಗೂಗಲ್ ಪೇ: ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ

ಪಡಿತರ ಚೀಟಿ ಜೊತೆ ಆಧಾರ್‌ ಸಂಖ್ಯೆ ಜೋಡಿಸಿಲ್ಲ ಎಂಬ ಕಾರಣಕ್ಕೆ 11 ವರ್ಷದ ಸಂತೋಶಿ ಕುಮಾರಿ ಅವರ ತಾಯಿ ಕೊಯಿಲಿ ದೇವಿ ಅವರಿಗೆ ಸರ್ಕಾರ ಪಡಿತರ ನಿರಾಕರಿಸಿತ್ತು. ಪಡಿತರ ದೊರೆಯದೆ ನಾಲ್ಕು ದಿನಗಳ ಕಾಲ ಹಸಿವಿನಿಂದ ಬಳಲಿದ ಸಂತೋಶಿ ಕುಮಾರಿ ಸಾವನ್ನಪ್ಪಿದ್ದಾಗಿ ಆರೋಪಿಸಲಾಗಿತ್ತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಅಮನ್‌ ಲೇಖಿ ಅವರು ಮನವಿಯು ಗೊಂದಲಕಾರಿಯಾಗಿದೆ ಎಂಬ ಕಾರಣಕ್ಕೆ ಮನವಿಯನ್ನು ವಿರೋಧಿಸಿದರು. “ಆಹಾರ ಭದ್ರತಾ ಕಾಯಿದೆಯಡಿ ಸಮಸ್ಯೆಗೆ ಪರಿಹಾರವಿದೆ. ತಪ್ಪು ಗ್ರಹಿಕೆಯಿಂದ ಮನವಿ ಸಲ್ಲಿಸಲಾಗಿದೆ. ಆಧಾರ್ ಲಭ್ಯವಿಲ್ಲದಿದ್ದರೆ ಪರ್ಯಾಯ ದಾಖಲೆಗಳನ್ನು ಸಲ್ಲಿಸಬಹುದು. ಈ ಅಂಶವನ್ನು ವಾದದಲ್ಲಿ ಮಂಡಿಸಿಲ್ಲ. ಆಧಾರ್ ಇರುವುದು ಅಥವಾ ಆಧಾರ್ ಇಲ್ಲದಿರುವುದು ಆಹಾರದ ಹಕ್ಕನ್ನು ನಿರಾಕರಿಸುವುದಿಲ್ಲಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ” ಎಂದು ಅವರು ನುಡಿದರು.

ವಾದ ಆಲಿಸಿದ ಬಳಿಕ ನ್ಯಾ. ಬೊಬ್ಡೆ ಅವರು ಇದು ಗಂಭೀರ ವಿಷಯವಾಗಿದ್ದು ನಾಲ್ಕು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಇದನ್ನು ನೀವು ಪ್ರತಿಕೂಲಾತ್ಮಕ ಪ್ರಕರಣ ಎಂದು ಭಾವಿಸಬಾರದು ಎಂದರು.

ಜಾರ್ಖಂಡ್‌ನಲ್ಲಿ ಹಸಿವಿನಿಂದ ಉಂಟಾದ ಸಾವು ಮತ್ತು ದೇಶಾದ್ಯಂತ ಮೂರು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಆರೋಪವನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ನಿರಾಕರಿಸಿತ್ತು. ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಆಹಾರ ನಿರಾಕರಿಸಿದ್ದನ್ನು ಪ್ರಶ್ನಿಸಿ ಗೊನ್ಸಾಲ್ವೆಸ್‌‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್‌ ಮಧ್ಯಪ್ರವೇಶಿಸಬೇಕಾಗಿತ್ತು. ಅಕ್ರಮ ತಡೆಯಲು 2.33 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಅಂದಿನ ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಅವರು ಸಂಸತ್ತಿನಲ್ಲಿ ನೀಡಿದ್ದ ಪ್ರತಿಕ್ರಿಯೆಯನ್ನು ಗೊನ್ಸಾಲ್ವೆಸ್‌‌ ಉಲ್ಲೇಖಿಸಿದ್ದರು.

ಆಹಾರ ಸಮಸ್ಯೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಮತ್ತು ತ್ವರಿತ ಪರಿಹಾರಕ್ಕಾಗಿ ಪ್ರತಿ ರಾಜ್ಯ ಸರ್ಕಾರವು ಆಂತರಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಅಥವಾ ನೋಡಲ್ ಅಧಿಕಾರಿಗಳನ್ನು ಹೊಂದಿರಬೇಕು ಎಂದು ಕಾಯಿದೆಯ ಸೆಕ್ಷನ್ 40 ಅನ್ನು ಕೇಂದ್ರ ಉಲ್ಲೇಖಿಸಿದೆ.

ನವೀಕರಿಸಿದ ವಸ್ತುಸ್ಥಿತಿ ವರದಿಯಲ್ಲಿ ಅರ್ಜಿದಾರರು ಈ ಪ್ರಕರಣದಲ್ಲಿ ಕೇಂದ್ರದ ಪ್ರತಿಕ್ರಿಯೆ "ಗಂಭೀರತೆಯಿಂದ ಕೂಡಿಲ್ಲ" ಎಂದು ಹೇಳಿದ್ದಾರೆ. “ಆಧಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ ಮಾಡಿರುವುದರಿಂದಾಗಿ ದೇಶದಲ್ಲಿ ಸುಮಾರು 4 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರದ್ದಾದ ಈ ಕಾರ್ಡ್‌ಗಳು ನಕಲಿ ಎಂದು ಕೇಂದ್ರ ಗಂಭೀರವಲ್ಲದ ರೀತಿಯಲ್ಲಿ ವಿವರಣೆ ನೀಡುತ್ತದೆ. ನಿಜ ಕಾರಣವೆಂದರೆ, ಐರಿಸ್ ಗುರುತಿಸುವಿಕೆ, ಹೆಬ್ಬೆರಳು ಮುದ್ರಣಗಳು, ಆಧಾರ್ ಸ್ವೀಕೃತಿ, ಗ್ರಾಮೀಣ ಪ್ರದೇಶ ಮತ್ತು ಕುಗ್ರಾಮಗಳಲ್ಲಿ ಅಂತರ್ಜಾಲದ ಕೆಲಸ ಮಾಡದಿರುವುದು ಇತ್ಯಾದಿ ಕಾರಣಗಳು ದೊಡ್ಡ ಪ್ರಮಾಣದಲ್ಲಿ ಪಡಿತರ ಚೀಟಿಗಳು ರದ್ದಾಗಲು ಕಾರಣವಾಗಿದೆ” ಎಂದು ವಸ್ತುಸ್ಥಿತಿ ವರದಿಯಲ್ಲಿ ತಿಳಿಸಲಾಗಿದೆ.

Kannada Bar & Bench
kannada.barandbench.com