ಭ್ರಷ್ಟಾಚಾರ ಪ್ರಕರಣ ತನಿಖೆಯ ತಡೆ ತೆರವಿಗೆ ಸಿಬಿಐ ಮನವಿ: ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಕರ್ನಾಟಕ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು, ಶಿವಕುಮಾರ್ ಅವರ ವಿಚಾರಣೆ ನಡೆಸದೆ ತೆರವುಗೊಳಿಸಲು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ನಿರಾಕರಿಸಿತು.
ಭ್ರಷ್ಟಾಚಾರ ಪ್ರಕರಣ ತನಿಖೆಯ ತಡೆ ತೆರವಿಗೆ ಸಿಬಿಐ ಮನವಿ: ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಸಿಬಿಐ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಡಿ ಕೆ ಶಿವಕುಮಾರ್‌ ಅವರ ಪ್ರತಿಕ್ರಿಯೆ ಕೇಳಿದೆ [ಸಿಬಿಐ ಮತ್ತು ಡಿ ಕೆ ಶಿವಕುಮಾರ್‌ ಇನ್ನಿತರರ ನಡುವಣ ಪ್ರಕರಣ].

ಕರ್ನಾಟಕ ಹೈಕೋರ್ಟ್‌ ನೀಡಿದ್ದ ಏಕಪಕ್ಷೀಯ ತಡೆಯಾಜ್ಞೆಯನ್ನು, ಶಿವಕುಮಾರ್‌ ಅವರ ವಿಚಾರಣೆ ನಡೆಸದೆ ತೆಗೆದು ಹಾಕಲು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ನಿರಾಕರಿಸಿತು.

ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿವಕುಮಾರ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸದಂತೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ಹಿಂದೆ ಅಂದರೆ ಜೂನ್‌ನಲ್ಲಿ ಕೂಡ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

Also Read
ಡಿಸಿಎಂ ಡಿ ಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಹೈಕೋರ್ಟ್‌ ತಡೆಯಾಜ್ಞೆ

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆಯ ಆದೇಶ ರದ್ದುಗೊಳಿಸುವಂತೆ 20 ಏಪ್ರಿಲ್ 2023ರಲ್ಲಿ ಶಿವಕುಮಾರ್‌ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್‌ ನ್ಯಾಯಮೂರ್ತಿ ಆರ್‌ ನಟರಾಜನ್‌ ವಜಾಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಶಿವಕುಮಾರ್‌ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನಿರ್ಧರಿಸುವವರೆಗೆ ಸಿಬಿಐ ತನಿಖೆಗೆ ಹೈಕೋರ್ಟ್‌ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಈ ಮಧ್ಯೆ ಮೇ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಶಿವಕುಮಾರ್‌ ಕರ್ನಾಟಕದ ಉಪಮುಖ್ಯಮಂತ್ರಿಯಾದರು. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್‌ ಜೂನ್ 2023ರಲ್ಲಿ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಆದಾಯ ತೆರಿಗೆ ಇಲಾಖೆ 2017ರಲ್ಲಿ ನಡೆಸಿದ ಶೋಧದ ಬಳಿಕ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ದೆಹಲಿ ಸೇರಿದಂತೆ ವಿವಿಧೆಡೆ ನಡೆಸಿದ ಶೋಧದ ವೇಳೆ ₹8.59 ಕೋಟಿ ಪತ್ತೆಯಾಗಿತ್ತು. ಅದರಲ್ಲಿ ಶಿವಕುಮಾರ್ ಅವರಿಗೆ ಸೇರಿದ ಜಾಗದಲ್ಲಿ ₹41 ಲಕ್ಷ ರೂ ದೊರೆತಿತ್ತು.

ನಂತರ ಜಾರಿ ನಿರ್ದೇಶನಾಲಯ (ಇಡಿ) ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3, 2019 ರಂದು ಬಂಧಿಸಲಾಗಿತ್ತು. ಆದರೆ, ದೆಹಲಿ ಹೈಕೋರ್ಟ್‌ ನೀಡಿದ ಆದೇಶದಂತೆ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರು. ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.

ಈ ಮಧ್ಯೆ, 2019ರ ಸೆಪ್ಟೆಂಬರ್ 9ರಂದು,  ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಬಿಜೆಪಿ ನೇತೃತ್ವದ ಅಂದಿನ ರಾಜ್ಯ ಸರ್ಕಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು.

Kannada Bar & Bench
kannada.barandbench.com