ಶ್ರದ್ಧಾ ಕೇಂದ್ರಗಳ ಯಥಾಸ್ಥಿತಿ ಕಾಯಿದೆ ಪ್ರಶ್ನಿಸಿ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌

ರಾಮಜನ್ಮಭೂಮಿ ವಿವಾದ ಹೋರಾಟ ತೀವ್ರಸ್ವರೂಪದಲ್ಲಿದ್ದಾಗ ಜಾರಿಗೊಂಡ ಕಾನೂನಿನ ಪ್ರಕಾರ 1947ರ ಆಗಸ್ಟ್‌ 15ಕ್ಕೂ ಮುನ್ನ ಇದ್ದಂತೆ ಶ್ರದ್ಧಾ ಸ್ಥಳಗಳನ್ನು ಯಥಾಸ್ಥಿತಿಯಲ್ಲಿರಸಬೇಕು, ಅಂಥ ಸ್ಥಳಗಳ ಮೇಲೆ ದೂರು ದಾಖಲಿಸುವುದಕ್ಕೆ ನಿಷೇಧ ಹೇರಲಾಗಿದೆ.
Mosque
Mosque

ಮಹತ್ತರ ಬೆಳವಣಿಗೆಯಲ್ಲಿ, ಎಲ್ಲಾ ಧಾರ್ಮಿಕ ಕೇಂದ್ರಗಳನ್ನು 1947ರ ಆಗಸ್ಟ್‌ 15ಕ್ಕೂ ಮುನ್ನ ಇದ್ದಂತೆ ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಹಾಗೂ ಅಂಥ ಸ್ಥಳಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಹೂಡುವುದನ್ನು ತಿರಸ್ಕರಿಸುವ ಶ್ರದ್ಧಾ ಕೇಂದ್ರಗಳ (ವಿಶೇಷ ನಿಬಂಧನೆಗಳು) ಕಾಯಿದೆ -1991 ಅನ್ನು ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಬಿಜೆಪಿ ವಕ್ತಾರ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ಎ ಎಸ್‌ ಬೋಪಣ್ಣ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಸ್ವಾತಂತ್ರ್ಯಕ್ಕೂ ಮುನ್ನ ಇದ್ದ ಸ್ಥಿತಿಯಲ್ಲಿಯೇ ಎಲ್ಲಾ ಧಾರ್ಮಿಕ ಸ್ಥಳಗಳ ರಚನೆಯು ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಮತ್ತು ಈ ಸ್ಥಳಗಳ ಕುರಿತಾಗಿ ಯಾವುದೇ ತೆರನಾದ ಮೊಕದ್ದಮೆ ಅಥವಾ ದೂರಿನ ವಿಚಾರಣೆಗೆ ಸಮ್ಮತಿಸದಂತೆ ನ್ಯಾಯಾಲಯವನ್ನು ತಡೆಯುವ ಈ ಕಾಯಿದೆಯನ್ನು ರಾಮಜನ್ಮಭೂಮಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಜಾರಿಗೊಳಿಸಲಾಗಿತ್ತು. ನ್ಯಾಯಾಲಯದಲ್ಲಿರುವ ಇಂಥ ಪ್ರಕರಣಗಳನ್ನು ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು.ಆದರೆ, ಸದರಿ ಕಾನೂನಿನಲ್ಲಿ ರಾಮಜನ್ಮಭೂಮಿ ಸ್ಥಳಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಈ ಕಾರಣದಿಂದಾಗಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಿತ್ತು.

ಅಯೋಧ್ಯಾ ಭೂಮಿಗೆ ವಿನಾಯಿತಿ ನೀಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ 2019ರಲ್ಲಿ ಈ ಕಾನೂನನ್ನು ಪ್ರಸ್ತಾಪಿಸಿ, ಆ ವಿವಾದಿತ ಭೂಮಿಯನ್ನು ಬಾಲದೇವ ರಾಮಲಲ್ಲಾಗೆ ಮಂಜೂರು ಮಾಡಿತ್ತು. ಇದೇ ಸಂದರ್ಭದಲ್ಲಿ ಕಾಯಿದೆಯ ಹಿನ್ನೆಲೆಯಲ್ಲಿ ಬೇರಾವುದೇ ಪ್ರದೇಶಕ್ಕೆ ಸಂಬಂಧಿಸಿದಂತೆ ಇಂಥ ಪ್ರಕರಣಗಳನ್ನು ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿತ್ತು.

Also Read
ಸಂವಿಧಾನಕ್ಕೆ ಅನುಗುಣವಾಗಿ ಧಾರ್ಮಿಕ ಪದ್ದತಿಗಳಿಗೆ ತಿದ್ದುಪಡಿ ಮಾಡಬಹುದು: ಸಂವಾದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್‌

ಸದರಿ ಕಾನೂನು ಜಾರಿಯಲ್ಲಿರುವುದರಿಂದ ಆಕ್ರಮಣಕಾರರು ನಡೆಸಿದ ಕಾನೂನುಬಾಹಿರ ಚಟುವಟಿಕೆಗಳು ಶಾಶ್ವತವಾಗಿ ಮುಂದುವರೆಯಲು ಅವಕಾಶ ದೊರೆತಿದ್ದು, ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖ‌ರಿಗೆ ಕಾನೂನು ಪರಿಹಾರ ದೊರೆಯುತ್ತಿಲ್ಲ ಎಂದು ಉಪಾಧ್ಯಾಯ ಮನವಿಯಲ್ಲಿ ವಿವರಿಸಿದ್ದಾರೆ.

“ಹಿಂದೂಗಳು, ಜೈನರು, ಬೌದ್ಧರು, ಸಿಖ್ಖರಿಗೆ ಸಂಬಂಧಿಸಿದ ಶ್ರದ್ಧಾ ಕೇಂದ್ರಗಳನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವುದಕ್ಕೆ ಪರಿಹಾರ ಕಂಡುಕೊಳ್ಳಲು ಮೊಕದ್ದಮೆ ದಾಖಲಿಸಲು ಅಥವಾ ಹೈಕೋರ್ಟ್‌ ಮೆಟ್ಟಿಲೇರಲು ಕೇಂದ್ರ ಸರ್ಕಾರವು ಸಂವಿಧಾನದ 226ನೇ ವಿಧಿಯಡಿ ನಿಷೇಧ ಹೇರಿದೆ. ಸಂವಿಧಾನದ 25-26ನೇ ವಿಧಿಯ ಪ್ರಕಾರ ಅವರು ತಮ್ಮ ಶ್ರದ್ಧಾ ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳ ಜೊತೆಗೆ ದೇವಸ್ಥಾನಗಳು ಮತ್ತು ದತ್ತಿ ನೀಡಿದ ಪ್ರದೇಶಗಳನ್ನು ಪುನಸ್ಥಾಪಿಸಲಾಗದು. ಅಲ್ಲದೇ ಆಕ್ರಮಣಕಾರರ ಕಾನೂನುಬಾಹಿರ ನಡೆ ಇದರಿಂದ ಶಾಶ್ವತವಾಗಿ ಮುಂದುವರೆಯಲಿದೆ” ಎಂದು ಹೇಳಿದ್ದಾರೆ.

Related Stories

No stories found.
Kannada Bar & Bench
kannada.barandbench.com