ಖಾಸಗಿ ವೈದ್ಯಕೀಯ ಕಾಲೇಜುಗಳು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಕಡ್ಡಾಯವಾಗಿ ಕೋಟಾ ಕಲ್ಪಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ನಡೆಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ಎನ್‌ಆರ್‌ಐ ಅಥವಾ ಮ್ಯಾನೇಜ್ಮೆಂಟ್ ಕೋಟಾ ಕಲ್ಪಿಸಬೇಕೆ, ಬೇಡವೇ, ಅನುಮತಿಯ ಗರಿಷ್ಠ ಮಿತಿಯೊಳಗೆ ಯಾವ ಹಂತದವರೆಗೆ ಅದನ್ನು ಕೈಗೊಳ್ಳಬಹುದು ಎಂದು ನಿರ್ಧರಿಸುವ ಹಕ್ಕು ಹೊಂದಿರುತ್ತವೆ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠವು ಹೊರಡಿಸಿರುವ ತೀರ್ಪುನಲ್ಲಿ ಉಲ್ಲೇಖಿಸಲಾಗಿದೆ.
“... ಯಾವುದೇ ನಿರ್ದಿಷ್ಟ ವರ್ಷದ ಅಥವಾ ಮಿತಿಗೆ ಸಂಬಂಧಿಸಿದಂತೆ ಎನ್‌ಆರ್‌ಐ ಕೋಟಾ ಪವಿತ್ರವಾಗಲಿ ಅಥವಾ ಅನುಲ್ಲಂಘನೀಯವಾಗಲಿ ಅಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ನ್ಯಾಯಪೀಠ ಹೇಳಿದೆ.
ಎನ್‌ಆರ್‌ಐ ಕೋಟಾ ರದ್ದುಪಡಿಸುವುದರ ಕುರಿತು ನಿರ್ದಿಷ್ಟ ಪ್ರಾಧಿಕಾರವು ತೀರ್ಮಾನ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮಂಜಸವಾದ ನೋಟಿಸ್ ನೀಡಬೇಕು. ಇದರ ಅನ್ವಯ ಆಕಾಂಕ್ಷಿಗಳು ಇತರೆ ಸೀಟುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳು ಎನ್‌ಆರ್‌ಐ ಕೋಟಾ ಕಲ್ಪಿಸುವುದು ಕಡ್ಡಾಯವಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು ಪಿ ಎ ಇನಾಂದಾರ್ ಪ್ರಕರಣದಲ್ಲಿ ಒಟ್ಟಾರೆ ಸೀಟುಗಳಲ್ಲಿ ಶೇ.15ರಷ್ಟು ಎನ್‌ಆರ್‌ಐ ಕೋಟಾ ನಿಬಂಧನೆ ಕಡ್ಡಾಯವಲ್ಲ ಎಂದು ಹೇಳಿರುವುದನ್ನು ಹೈಕೋರ್ಟ್ ನ್ಯಾಯಪೀಠ ಉಲ್ಲೇಖಿಸಿತ್ತು. ಈ ಕೋಟಾದಡಿ ಎನ್‌ಆರ್‌ಐಗಳಿಗೆ ಪ್ರವೇಶಾತಿ ನಿರಾಕರಿಸುವಂತಿಲ್ಲ ಎಂದು ಆದೇಶಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠವು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು.
ಮೇಲ್ಮನವಿದಾರರನ್ನು ಹಿರಿಯ ವಕೀಲ ವಿ ಗಿರಿ ಪ್ರತಿನಿಧಿಸಿದ್ದರು. ಹಿರಿಯ ವಕೀಲರಾದ ಸಿದ್ಧಾರ್ಥ್ ದವೆ ಮತ್ತು ವಾಸಿಮ್ ಖಾದ್ರಿ, ವಕೀಲರಾದ ಆನಂದ್ ವರ್ಮಾ ಮತ್ತು ಡಿ ಕೆ ಗಾರ್ಗ್ ಅವರು ಅಭ್ಯರ್ಥಿಗಳನ್ನು ಪ್ರತಿನಿಧಿಸಿದ್ದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಷ್ ಸಿಂಘ್ವಿ ಅವರು ರಾಜಸ್ಥಾನ ಸರ್ಕಾರದ ಪರ ವಾದಿಸಿದರೆ ಹಿರಿಯ ವಕೀಲ ನಕುಲ್ ದಿವಾನ್ ಅವರು ಮಧ್ಯಪ್ರವೇಶಕಾರರೊಬ್ಬರ ಪರವಾಗಿ ವಾದಿಸಿದರು.