ಬುಲ್ಡೋಜರ್ ನ್ಯಾಯಕ್ಕೆ ಮುಂದಾದ ಅಸ್ಸಾಂ ಸರ್ಕಾರ: ಸೋಮವಾರ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

ಆರೋಪಿಗಳ ಮನೆ ಅಥವಾ ಅಂಗಡಿಗಳನ್ನು ವಿಚಾರಣಾರಹಿತವಾಗಿ ನೆಲಸಮ ಮಾಡುವ ಪ್ರವೃತ್ತಿಗೆ ತಡೆಯೊಡ್ಡಿದ್ದ ಪೀಠವೇ ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ.
Bulldozer
Bulldozer
Published on

ಅಸ್ಸಾಂನ ಸೋನಾಪುರ್ ಪ್ರದೇಶದಲ್ಲಿ ಉದ್ದೇಶಿತ ತೆರವು ಮತ್ತು ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಾಳೆ (ಸೋಮವಾರ) ವಿಚಾರಣೆ ನಡೆಸಲಿದೆ . [ಫಾರೂಕ್ ಅಹ್ಮದ್ ಮತ್ತು ಅಥವಾ ಅಸ್ಸಾಂ ಸರ್ಕಾರ ನಡುವಣ ಪ್ರಕರಣ]

ಅರ್ಜಿ ಸಲ್ಲಿಸಿರುವ 48 ನಿವಾಸಿಗಳು ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್‌ ಈಚೆಗೆ  ನೀಡಿರುವ ಮಧ್ಯಂತರ ಆದೇಶವನ್ನು ಈ ತೆರವು ಕಾರ್ಯಾಚರಣೆ ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

Also Read
'ಬುಲ್ಡೋಜರ್ ನ್ಯಾಯʼ ನೀಡದಂತೆ ಸುಪ್ರೀಂ ಕೋರ್ಟ್‌ ಛಡಿಯೇಟು: ಮಾರ್ಗಸೂಚಿಗೆ ನಿರ್ಧಾರ

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ವಿಚಾರಣೆ ನಡೆಸದೆ ನೆಲಸಮ ಮಾಡುವ ಪ್ರವೃತ್ತಿಯನ್ನು ನಿಷೇಧಿಸಿ ಈಚೆಗೆ ಮಧ್ಯಂತರ ಆದೇಶ ನೀಡಿದ್ದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವೇ ಈ ಅರ್ಜಿಯ ವಿಚಾರಣೆ ನಡೆಸಲಿದೆ.

ನ್ಯಾಯಾಲಯದ ಅನುಮತಿ ಇಲ್ಲದೆ ಇಂತಹ ಕಾರ್ಯಾಚರಣೆಗೆ ಮುಂದಾಗುವಂತಿಲ್ಲ ಎಂದು ಆಗ ಪೀಠ ನುಡಿದಿತ್ತು. ಆದರೆ ಕಟ್ಟಡ ಅಕ್ರಮವಾಗಿದ್ದರೆ ಅದನ್ನು ತೆರವುಗೊಳಿಸುವುದಕ್ಕೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.

ಗುವಾಹಟಿಯ ಹೊರವಲಯದಲ್ಲಿರುವ ಕಾಮರೂಪ ಜಿಲ್ಲೆ ವ್ಯಾಪ್ತಿಗೆ ಬರುವ ಸೋನಾಪುರದ  ವಿವಿಧ ನಿವಾಸಿಗಳನ್ನು 'ಅಕ್ರಮ ಒತ್ತುವರಿದಾರರು' ಅಥವಾ ಗಿರಿಜನರ ಭೂಮಿಯನ್ನು 'ಅತಿಕ್ರಮಿಸಿಕೊಂಡಿರುವವರು' ಎಂದು ಜಿಲ್ಲಾಡಳಿತ ಈಚೆಗೆ ವರ್ಗೀಕರಿಸಿತ್ತು. ಇದನ್ನು ಪ್ರಶ್ನಿಸಿ ನಿವಾಸಿಗಳು ವಕೀಲ ಅದೀಲ್ ಅಹಮದ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.  

Also Read
ಬುಲ್ಡೋಜರ್‌ ಬಳಸಿ ಅಂಗಡಿ ಧ್ವಂಸ: ₹5 ಲಕ್ಷ ಪರಿಹಾರ ಪಾವತಿಸಲು ಸರ್ಕಾರಕ್ಕೆ ಜಾರ್ಖಂಡ್‌ ಹೈಕೋರ್ಟ್‌ ಆದೇಶ

ಪವರ್ ಆಫ್ ಅಟಾರ್ನಿ ಮೂಲಕ ಭೂಮಿಯ ಮೇಲೆ ತಮಗೆ ಹಕ್ಕಿದೆ. ಈ ಪ್ರದೇಶದಲ್ಲಿ ಸಂರಕ್ಷಿತ ಬುಡಕಟ್ಟು ಪಟ್ಟಿ ರೂಪಿಸುವ ಮೊದಲು ಅಂದರೆ 1920ರ ದಶಕದಿಂದಲೂ ತಮ್ಮ ಕುಟುಂಬಗಳು ವಾಸ ಇವೆ. ಇಲ್ಲಿ ವಾಸವಾಗಿರುವ ಆಧಾರದಲ್ಲಿಯೇ ತಮಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾನದ ಗುರುತಿನ ಚೀಟಿಗಳನ್ನು ಒದಗಿಸಲಾಗಿದೆ ಎಂದು ಅರ್ಜಿ ವಿವರಿಸಿದೆ.

ಇಷ್ಟಾದರೂ ಸರ್ಕಾರ ಕಾನೂನುಬಾಹಿರವಾಗಿ ತಮ್ಮ ಕಟ್ಟಡಗಳನ್ನು ಕೆಡವಲು ಮುಂದಾಗಿದೆ. ಗುವಾಹಟಿ ಹೈಕೋರ್ಟಿನ ಮುಂದೆ ಮಧ್ಯಂತರ ರಕ್ಷಣೆಯ ರೂಪವಾಗಿ ದಾಖಲಿಸಲ್ಪಟ್ಟಿರುವ ಒಪ್ಪಂದದ ಹೊರತಾಗಿಯೂ ಅಧಿಕಾರಿಗಳು ನೆಲಸಮಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಈ ಕಾರ್ಯಾಚರಣೆ ನ್ಯಾಯಾಲಯಗಳ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆಯಾಗಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ತೆರವು ಪ್ರಕ್ರಿಯೆಯನ್ನು ಕೈಬಿಡಲು ನಿರ್ದೇಶಿಸಬೇಕು ಎಂದು ಅರ್ಜಿ ಕೋರಿದೆ.

Kannada Bar & Bench
kannada.barandbench.com