ಕರ್ನಾಟಕ ತಮಿಳುನಾಡು ನಡುವಿನ ಪೆನ್ನಾರ್ ನದಿ ವಿವಾದ: ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ

ಸಚಿವರುಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತಾದರೂ ಪ್ರಕರಣ ನಿರ್ಧರಿಸಲು ನ್ಯಾಯಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.
Supreme Court
Supreme Court
Published on

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅಂತಾರಾಜ್ಯ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ‌ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕಾಗಿ ನ್ಯಾಯಮಂಡಳಿ ರಚಿಸುವ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ [ತಮಿಳುನಾಡು ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಂದಿನಿಂದ ಒಂದು ತಿಂಗಳ ಒಳಗಾಗಿ ಅಧಿಕೃತ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆ.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

“ಇಂದಿನಿಂದ ಒಂದು ತಿಂಗಳ ಅವಧಿಯೊಳಗೆ ಅಧಿಕೃತ ಗೆಜೆಟ್‌ನಲ್ಲಿ ಸೂಕ್ತ ಅಧಿಸೂಚನೆ ಹೊರಡಿಸಿ, ಪಕ್ಷಗಳ ನಡುವಿನ ಅಂತಾರಾಜ್ಯ ಜಲವಿವಾದದ ತೀರ್ಪಿಗಾಗಿ ನ್ಯಾಯಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದನ್ನು ತಪ್ಪಿಸಲು ಯಾವುದೇ ಕಾರಣ ಕಾಣುತ್ತಿಲ್ಲ,” ಎಂದು ಅದು ಹೇಳಿದೆ.

ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ 2018ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ಹೂಡಿತ್ತು.

ನದಿಯ ಮೇಲ್ದಂಡೆ ಭಾಗದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳಿಂದಾಗಿ ಕೆಳದಂಡೆ ಭಾಗದಲ್ಲಿರುವ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಮಿಳುನಾಡು ವಾದಿಸಿತ್ತು.

ಸಚಿವರುಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತಾದರೂ ಪ್ರಕರಣ ನಿರ್ಧರಿಸಲು ನ್ಯಾಯಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.

ಮಾತುಕತೆಗಳ ಮೂಲಕ ವಿವಾದ  ಪರಿಹರಿಸಲು ವಿಳಂಬ ಆಗಿರುವುದಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ನವೆಂಬರ್ 2022ರಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಇದಕ್ಕೂ ಮುನ್ನ, ಜನವರಿ 2019ರಲ್ಲಿ, ಈ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ನ್ಯಾಯಮಂಡಳಿ ರಚಿಸುವಂತೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ನಂತರ ಮೇ ತಿಂಗಳಲ್ಲಿ ಈ ಉದ್ದೇಶಕ್ಕಾಗಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಗಡುವು ವಿಸ್ತರಿಸಿತ್ತು.

Also Read
ಅರಾವಳಿ ಕುರಿತ ತನ್ನದೇ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ಪೆನ್ನಾರ್‌ ಜಲವಿವಾದ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಕಾರ್ಯದರ್ಶಿ ಮೂಲಕ ಅನುಮೋದನೆಗಾಗಿ ಕಳುಹಿಸಲಾಗಿದ್ದರೂ, ಕೇಂದ್ರ ಸಚಿವ ಸಂಪುಟ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು 2023ರಲ್ಲಿ, ಕೇಂದ್ರ ಜಲಶಕ್ತಿ ಸಚಿವಾಲಯ  ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 2025ರಲ್ಲಿ ಕಾಯ್ದಿರಿಸಿತ್ತು.

ಮತ್ತೊಂದೆಡೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕಗಳಿಂದ ಜೀವಂತ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2018ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಜಲಸಂಪತ್ತುಗಳು ರಾಷ್ಟ್ರದ ಆಸ್ತಿಯಾಗಿದ್ದು, ಯಾವುದೇ ಒಂದು ರಾಜ್ಯ ಅವುಗಳ ಮೇಲೆ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದಿತ್ತು.

Kannada Bar & Bench
kannada.barandbench.com