2020- 21ರ ಶೈಕ್ಷಣಿಕ ವರ್ಷಕ್ಕೆ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪದವಿಗೆ ಪ್ರವೇಶ ಕಲ್ಪಿಸಲು ಅಗತ್ಯವಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಕಟಾಫ್ ಅಂಕಗಳನ್ನು ಶೇ. ಹತ್ತರಷ್ಟು ಇಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ (ಹರ್ಷಿತ್ ಅಗರ್ವಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).
ಶೇ. 40ರಷ್ಟು ಅಂಕ ಪಡೆದ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಮತ್ತು ಶೇ. 30 ರಷ್ಟು ಕಟಾಫ್ ಅಂಕ ಪಡೆದ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳು ಪ್ರವೇಶಾತಿಗೆ ಅರ್ಹರು ಎಂದು ನ್ಯಾಯಾಲಯ ತಿಳಿಸಿದೆ. 2016ರ ಅಂಗವಿಕಲರ ಹಕ್ಕುಗಳ ಕಾಯಿದೆ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಾನದಂಡದಂತೆ ಶೇ. 35 ರಷ್ಟು ಅಂಕ ಪಡೆದ ವಿಶೇಷ ಚೇತನ ಅಭ್ಯರ್ಥಿಗಳು ಪ್ರವೇಶಾತಿಗೆ ಅರ್ಹರು ಎಂದು ನ್ಯಾಯಾಲಯ ತಿಳಿಸಿದೆ.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಐ) ಶಿಫಾರಸು ಮಾಡಿದರೂ ಕಟ್-ಆಫ್ ಅಂಕಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಸಂಬಂಧಪಟ್ದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಕನಿಷ್ಠ ಅಂಕ ಪಡೆಯಲು ಸಾಧ್ಯವಿಲ್ಲದಿದ್ದಾಗ ಭಾರತೀಯ ದಂತ ಮಂಡಳಿಯ (ಡಿಸಿಐ) ನಿಯಮಾವಳಿಗಳ ಪ್ರಕಾರ ಡಿಸಿಐ ಜೊತೆ ಸಮಾಲೋಚಿಸಿ ಕೇಂದ್ರ ಸರ್ಕಾರ ಕನಿಷ್ಠ ಅಂಕಗಳನ್ನು ಕಡಿಮೆ ಮಾಡುವ ವಿವೇಚನಾಧಿಕಾರ ಹೊಂದಿದೆ. ಕಟಾಫ್ ಅಂಕಗಳನ್ನು ಶೇ 20ರಷ್ಟು ಕಡಿಮೆ ಮಾಡುವಂತೆ ಡಿಸಿಐ ಕಳೆದ ಡಿಸೆಂಬರ್‌ನಲ್ಲಿ ಪ್ರಸ್ತಾಪಿಸಿತ್ತು. 2020-2021ನೇ ಸಾಲಿನ ಎಂಬಿಬಿಎಸ್ / ಬಿಡಿಎಸ್, (ಯುಜಿ) ಆಯುಷ್ ಮತ್ತು ಇತರ ಯುಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕೇವಲ 7,71,500 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಿತ್ತು. ಪ್ರವೇಶ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರವೇಶಾರ್ಹತೆ ಪಡೆದಿಲ್ಲ ಎಂದು ಡಿಸಿಐ ಸ್ಪಷ್ಟಪಡಿಸಿತ್ತು. ಆದರೆ ಇದನ್ನು ಒಪ್ಪದ ಕೇಂದ್ರ ಸರ್ಕಾರ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳು ಲಭ್ಯವಿರುವುದರಿಂದ ಕಟ್-ಆಫ್ ಅಂಕಗಳನ್ನು ಕಡಿಮೆ ಮಾಡದಿರಲು ನಿರ್ಧಾರಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಸೂಚಿಸಿತ್ತು.
ತೀರ್ಪನ್ನು ಇಲ್ಲಿ ಓದಿ: