ವಿಕಲಚೇತನ ಕೈದಿಗಳಿಗೆ ವಿವಿಧ ಸೌಲಭ್ಯ: ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ನಿರ್ದೇಶನ

ಜೈಲುಗಳಲ್ಲಿನ ವ್ಯವಸ್ಥಿತ ನಿರ್ಲಕ್ಷ್ಯ ಪರಿಹರಿಸುವುದು, ಮೂಲಸೌಕರ್ಯ, ವೈದ್ಯಕೀಯ ಆರೈಕೆ ಮತ್ತು ಅಂಗವಿಕಲ ಕೈದಿಗಳಿಗೆ ಕುಟುಂಬ ಬೆಂಬಲ ಒದಗಿಸುವುದು ಈ ಆದೇಶದ ಉದ್ದೇಶವಾಗಿದೆ.
Persons with disabilities
Persons with disabilities
Published on

ವಿಕಲ ಚೇತನ ಕೈದಿಗಳಿಗೆ ಪ್ರವೇಶ, ನೆರವು ಸೇವೆ ಹಾಗೂ ಹಕ್ಕು ರಕ್ಷಣೆಗಾಗಿ ಏಕರೂಪದ ವ್ಯವಸ್ಥೆ ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ [ಸತ್ಯನ್ ನರವೂರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮುರುಗನಾಥಂ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣದಲ್ಲಿ ತಾನು ಈ ಹಿಂದೆ ನೀಡಿದ್ದ ಸುರಕ್ಷತಾ ಕ್ರಮಗಳ ಕುರಿತ ಆದೇಶವನ್ನು ದೇಶದೆಲ್ಲೆಡೆ ವಿಸ್ತರಿಸಿ ಈ ಸಂಬಂಧ ದೇಶದ ಜೈಲು ಅಧಿಕಾರಿಗಳು ವಿವರವಾದ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಡಿ. 2ರಂದು ನೀಡಿದ ಆದೇಶ ತಿಳಿಸಿದೆ.

Also Read
ವಿಕಲಚೇತನ ನ್ಯಾಯವಾದಿಗಳಿಗೆ ವಕೀಲರ ಸಂಸ್ಥೆಗಳಲ್ಲಿ ಮೀಸಲಾತಿ: ಬಿಸಿಐಗೆ ಸುಪ್ರೀಂ ಕೋರ್ಟ್ ಸಲಹೆ

ಜೈಲುಗಳಲ್ಲಿ ಗಾಲಿ ಕುರ್ಚಿಯಲ್ಲಿ ಸಂಚರಿಸಲು ಅನುವಾಗುವಂತಹ ಸ್ಥಳ, ಸುಲಭವಾಗಿ ಪ್ರವೇಶಿಸಬಹುದಾದ ಶೌಚಾಲಯಗಳು, ರ‍್ಯಾಂಪ್‌ಗಳು ಹಾಗೂ ಸುರಕ್ಷಿತ ವಾತಾವರಣ ಒದಗಿಸಬೇಕು ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಕ್ರಮಗಳನ್ನು ವಿಳಂಬವಿಲ್ಲದೆ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಭಾರತೀಯ ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಅಥವಾ ಸಜಾಬಂದಿಗಳಾಗಿ ದಾಖಲಾದ ಅಂಗವಿಕಲರಿಗೆ ಉತ್ತಮ ಕಾನೂನು ಮತ್ತು ಮೂಲಸೌಕರ್ಯ  ಒದಗಿಸುವಂತೆ ಕೋರಿ ಕಾರ್ಯಕರ್ತ ಸತ್ಯನ್ ನರವೂರ್ ಅವರು ಸಲ್ಲಿಸಿದ್ದ ಅರ್ಜಿ  ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.

ಅಂಗವೈಕಲ್ಯ ಮತ್ತು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟ ಹೋರಾಟಗಾರರಾದ ಜಿ ಎನ್‌ ಸಾಯಿಬಾಬಾ ಮತ್ತು ಸ್ಟ್ಯಾನ್‌ ಸ್ವಾಮಿ ಅವರ ಪ್ರಕರಣಗಳನ್ನು ಅರ್ಜಿ ಉಲ್ಲೇಖಿಸಿತ್ತು.

Also Read
ವಿಕಲಚೇತನ ನ್ಯಾಯವಾದಿಗಳ ಕಾನೂನು ಸಂಸ್ಥೆ ಉದ್ಘಾಟನೆ: ನಿವೃತ್ತ ಸಿಜೆಐ ಚಂದ್ರಚೂಡ್ ಭಾಗಿ

ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಮುಖಾಂಶಗಳು ಇಂತಿವೆ:

  • ಮುರುಗನಾಥಂ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣದಲ್ಲಿ ತಾನು ಈ ಹಿಂದೆ ನೀಡಿದ್ದ ಸುರಕ್ಷತಾ ಕ್ರಮಗಳ ಕುರಿತ ಆದೇಶವನ್ನು ದೇಶದೆಲ್ಲೆಡೆ ವಿಸ್ತರಿಸಬೇಕು.

  • ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿನಾಯಿತಿ ಈ ನಿರ್ದೇಶನಗಳನ್ನು ಜಾರಿಗೊಳಿಸಬೇಕು.

  •  ಅಂಗವೈಕಲ್ಯದ ಕಾರಣಕ್ಕೆ ಕೈದಿಗಳು ಶಿಕ್ಷಣ ಮುಂದುವರೆಸದಂತಾಗಬಾರದು. ಅವರ ಶಿಕ್ಷಣಕ್ಕೆ ಅಗತ್ಯ ಸೌಲಭ್ಯವನ್ನು ಜೈಲುಗಳು ಒದಗಿಸಲೇಬೇಕು.

  • ಜೈಲುಗಳಲ್ಲಿ ವಿಕಲಚೇತನ ಹಕ್ಕುಗಳ ಕಾಯಿದೆ ಉಲ್ಲಂಘಿಸಿದವರಿಗೆ ಕಾಯಿದೆಯ ಸೆಕ್ಷನ್ 89ರ ಅಡಿ ದಂಡ ವಿಧಿಸಬೇಕು. ಜೈಲು ಸಿಬ್ಬಂದಿ ಮತ್ತು ಕಾನೂನು ನೆರವುದಾರರಿಗೆ ಇದರ ಬಗ್ಗೆ ತರಬೇತಿ ನೀಡಬೇಕು.

  • ವಾಕರ್‌, ಗಾಲಿ ಕುರ್ಚಿ, ಶ್ರವಣ ಸಾಧನ ಮುಂತಾದ ನೆರವು ಸಾಧನಗಳ ಖರೀದಿ ಸಂಗ್ರಹಣೆ, ನಿರ್ವಹಣೆ ಹಾಗೂ ಸರಕ್ಷಿತ ಬಳಕೆಗೆ ಪ್ರತಿಯೊಂದು ರಾಜ್ಯ ಸರ್ಕಾರವೂ ವಿವರವಾದ ಕ್ರಿಯಾಯೋಜನೆ ಸಲ್ಲಿಸಬೇಕು.

  • ಕುಟುಂಬಸ್ಥರು ಗುರುತರ ಅಂಗವೈಕಲ್ಯಕ್ಕೀಡಾದ ಕೈದಿಗಳನ್ನು ಹೆಚ್ಚುವರಿಯಾಗಿ ಭೇಟಿಯಾಗಲು ಅವಕಾಶ ಕಲ್ಪಿಸಬೇಕು.

  • ತಾನು ನೀಡಿರುವ ನಿರ್ದೇಶನಗಳು ಸಂಪೂರ್ಣ ಜಾರಿಯಾಗಿವೆಯೇ ಎಂಬ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಾಲ್ಕು ತಿಂಗಳೊಳಗೆ (ಏಪ್ರಿಲ್‌ 7) ಅನುಪಾಲನಾ ವರದಿ ಸಲ್ಲಿಸಬೇಕು.  

[ಆದೇಶದ ಪ್ರತಿ]

Attachment
PDF
Sathyan_Naravoor_v__Union_of_India___Ors
Preview
Kannada Bar & Bench
kannada.barandbench.com