
ವಿಕಲಚೇತನ ನ್ಯಾಯವಾದಿಗಳನ್ನೇ ಸಂಪೂರ್ಣವಾಗಿ ಒಳಗೊಂಡಿರುವ ಕಾನೂನು ಸಂಸ್ಥೆ ಝೆನ್ ಆಕ್ಸೆಸ್ ಲಾ ಅಸೋಸಿಯೇಟ್ಸ್ ಗುರುವಾರ ಉದ್ಘಾಟನೆಗೊಂಡಿದ್ದು ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಡಿ ವೈ ಚಂದ್ರಚೂಡ್ ಭಾಗವಹಿಸಿದ್ದರು.
ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಸಂಸ್ಥೆ ಉದ್ಘಾಟನೆಯಾಗಿದ್ದು ಕಾರ್ಪೊರೇಟ್ ಮತ್ತು ಗುತ್ತಿಗೆ ಕಾನೂನು, ಬೌದ್ಧಿಕ ಆಸ್ತಿ, ಸೇವಾ ಕಾನೂನು ಹಾಗೂ ಅಂಗವೈಕಲ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಸ್ಥೆಯು ಸೇವೆ ಒದಗಿಸಲಿದೆ.
ಈ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಚಂದ್ರಚೂಡ್, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ- 2016ರ ಅಡಿಯಲ್ಲಿ ವಿಕಲಚೇತನ ಆಯುಕ್ತರಿಗೆ ನೀಡಲಾದ ಅಧಿಕಾರಗಳನ್ನು ಮರುಪರಿಶೀಲಿಸಲು ಇದು ಸಕಾಲ ಎಂದರು.
ಕಾಯಿದೆ ಜಾರಿಗೆ ವಿಧಿಸಲಾದ ಗಡುವು ಪಾಲಿಸದವರಿಗೆ ಆರ್ಥಿಕ ದಂಡ ವಿಧಿಸುವಂತೆ ಆದೇಶಿಸುವ ಅಧಿಕಾರವನ್ನು ಆಯುಕ್ತರಿಗೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ವಿಕಲಚೇತನರಿಗೆ ಸ್ವಯಂಪ್ರೇರಿತವಾಗಿ ಅವಕಾಶ ಕಲ್ಪಿಸುವವರಿಗೆ ಉತ್ತೇಜನ ನೀಡಲು ತೆರಿಗೆ ಪ್ರೋತ್ಸಾಹಕಗಳನ್ನು ನೀಡಬೇಕು ಎಂಬುದಾಗಿ ಕರೆ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಂದ್ರಚೂಡ್ ಅವರು, ಅಂಗವೈಕಲ್ಯ ಹಕ್ಕುಗಳ ಪ್ರಕರಣಗಳ ವಿಚಾರಣೆ ತ್ವರಿತಗೊಳಿಸುವುದಕ್ಕೆ ವಿಶೇಷ ಪೀಠ ಸ್ಥಾಪಿಸುವುದು ಒಂದು ಆಯ್ಕೆಯಾಗಿದ್ದರೂ ಎಲ್ಲ ನ್ಯಾಯಪೀಠಗಳಲ್ಲಿ ಇಂತಹ ಪ್ರಕರಣಗಳನ್ನು ಸಂಯೋಜಿಸುವುದು ಹೆಚ್ಚು ಪರಿಣಾಮಕಾರಿ ಎಂದರು. ವಿಕಲಚೇತನರ ಹಕ್ಕುಗಳ ಬಗ್ಗೆ ನ್ಯಾಯಾಂಗವು ವಿಕಸಿತವಾಗಿದ್ದು ಈಗ ಹೆಚ್ಚಿನ ತಿಳಿವಳಿಕೆ ಮತ್ತು ಸಹಾನುಭೂತಿ ಹೊಂದಿದೆ ಎಂದು ಅವರು ಹೇಳಿದರು.
ವಿಕಲಚೇತನ ವಕೀಲರ ಸಂಖ್ಯೆ ಹೆಚ್ಚಳವಾಗಲು ಕೇಂದ್ರ ಸರ್ಕಾರ ಅವರನ್ನು ಸರ್ಕಾರಿ ವಕೀಲರನ್ನಾಗಿ ನೇಮಿಸಬೇಕು ಎಂದರು. ಜೊತೆಗೆ ಅಂಗವಿಕಲ ವ್ಯಕ್ತಿಗಳ ಕಾನೂನು ಪ್ರಾತಿನಿಧ್ಯ ಮತ್ತು ವಕಾಲತ್ತುಗಳಲ್ಲಿ ಸೇರ್ಪಡೆ ಕುರಿತು ಚರ್ಚಿಸಲು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ಕಾನೂನು ಕಾರ್ಯದರ್ಶಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವಿಕಲಚೇತನ ಆಯುಕ್ತರನ್ನು ಒಳಗೊಂಡ ರಾಷ್ಟ್ರೀಯ ಸಮ್ಮೇಳನ ನಡೆಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ತಮ್ಮ ಇಬ್ಬರು ವಿಕಲಚೇತನ ಹೆಣ್ಣುಮಕ್ಕಳ ಅಗತ್ಯಗಳನ್ನು ಪೂರೈಸಲು ದೆಹಲಿಯಲ್ಲಿ ಸೂಕ್ತ ನಿವಾಸ ಹುಡುಕಲು ತಾವು ಕಷ್ಟಪಡುತ್ತಿರುವುದಾಗಿ ಅವರು ತಿಳಿಸಿದರು. ನ್ಯಾ. ಚಂದ್ರಚೂಡ್ ಅವರು ಏಪ್ರಿಲ್ 30ರೊಳಗೆ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸಲಿದ್ದಾರೆ.