
ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಅನನುಕೂಲಕರ ಸಮುದಾಯಗಳ ಮಕ್ಕಳಿಗೆ ಶೇ.25ರಷ್ಟು ಮೀಸಲಾತಿ ನೀಡುವ ಕೋಟಾದಡಿ ಖಾಸಗಿ ಶಾಲೆಗಳಲ್ಲಿ ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ [ಪೌಲೋಮಿ ಪಾವಿನಿ ಶುಕ್ಲಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶ, ಗುಜರಾತ್ ಹಾಗೂ ದೆಹಲಿಯಂತಹ ರಾಜ್ಯಗಳು ಈ ನಿಟ್ಟಿನಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಿವೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಉಳಿದ ರಾಜ್ಯಗಳೂ ನಾಲ್ಕು ವಾರಗಳಲ್ಲಿ ಇದೇ ರೀತಿಯ ಅಧಿಸೂಚನೆ ಹೊರಡಿಸುವಂತೆ ಆದೇಶಿಸಿತು.
ಇದಲ್ಲದೆ, ಶಾಲೆಗಳಿಗೆ ಪ್ರವೇಶ ಪಡೆದ ಅಥವಾ ಪಡೆಯದ ಅನಾಥ ಮಕ್ಕಳ ಸಮೀಕ್ಷೆ ನಡೆಸಬೇಕು. ಅಂತೆಯೇ ಶಾಲೆಗಳಿಗೆ ಪ್ರವೇಶ ಏಕೆ ನೀಡಿಲ್ಲ ಎಂಬ ಬಗ್ಗೆ ಸಮೀಕ್ಷೆಯಲ್ಲಿ ದಾಖಲಿಸಬೇಕು. ಸಮೀಕ್ಷೆ ನಡೆಯುತ್ತಿರುವಂತೆಯೇ, ಅನಾಥ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಗಳನ್ನು ಮಾಡಬೇಕು ಎಂದೂ ಅದು ರಾಜ್ಯಗಳಿಗೆ ಆದೇಶಿಸಿತು.
ಭಾರತದಲ್ಲಿ ಗುಣಮಟ್ಟದ ಏಕಪ್ರಕಾರದ ಶಿಕ್ಷಣ, ಮೀಸಲಾತಿಗೆ ಆಗ್ರಹಿಸಿ ಹಾಗೂ ಅನಾಥ ಮಕ್ಕಳ ಸಂಖ್ಯೆಯನ್ನು ತಿಳಿಸುವ ಸಮೀಕ್ಷೆ ನಡೆಸಬೇಕು ಎಂದು ಕೋರಿ ವಕೀಲೆ ಪೌಲೋಮಿ ಪಾವಿನಿ ಶುಕ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ಪೀಠ ಈ ನಿರ್ದೇಶನಗಳನ್ನು ನೀಡಿತು.
ಅನಾಥ ಮಕ್ಕಳ ಬಗ್ಗೆ ಅಧಿಕೃತ ದತ್ತಾಂಶ ಇಲ್ಲದಿರುವುದನ್ನು ವಕೀಲೆ ಎತ್ತಿ ತೋರಿಸಿದ್ದರು. ಇದು ಸಮಾಜದ ದುರ್ಬಲ ವರ್ಗದ ಬಗ್ಗೆ ದೇಶದ ಅಸಡ್ಡೆಯನ್ನು ತೋರಿಸುತ್ತದೆ ಎಂದು ಹೇಳಿದ್ದರು.
ಇಂದು ನ್ಯಾಯಾಲಯದ ಮುಂದೆ ಹಾಜರಾದ ಪೌಲೋಮಿ ಅವರು, ಭಾರತ ಸರ್ಕಾರವು ದೇಶದಲ್ಲಿ ಅನಾಥ ಮಕ್ಕಳ ದತ್ತಾಂಶವನ್ನು ಇರಿಸಿಕೊಂಡಿಲ್ಲ. ವಿಶ್ವಾಸಾರ್ಹ ದತ್ತಾಂಶವು ಎನ್‌ಜಿಒಗಳು ಮತ್ತು ಯುನಿಸೆಫ್‌ನಂತಹ ಸ್ವತಂತ್ರ ಸಂಸ್ಥೆಗಳಿಂದ ಬಂದಿದೆ. ಭಾರತದಲ್ಲಿ 29.6 ಮಿಲಿಯನ್ (2.96 ಕೋಟಿ) ಅನಾಥ ಮಕ್ಕಳಿದ್ದಾರೆ ಎಂದು ಈ ದತ್ತಾಂಶ ಹೇಳುತ್ತಿವೆ ಎಂದರು
ಬಳಿಕ ಅರ್ಜಿಯನ್ನು ವಿಚಾರಣೆ ನಡೆಸುವ ಅಗತ್ಯವಿದೆ ಎಂದ ನ್ಯಾಯಾಲಯ ಅಂತೆಯೇ ರಾಜ್ಯಗಳಿಗೆ ನಿರ್ದೇಶನ ನೀಡಿತು.