ಲೈಂಗಿಕ ಕಾರ್ಯಕರ್ತರಿಗೆ ಪಡಿತರ, ಗುರುತಿನ ಚೀಟಿ ವಿತರಣೆಗೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಪಡಿತರ ಚೀಟಿ, ವಸತಿ ವಿಳಾಸ ಅಥವಾ ವೃತ್ತಿಗೆ ಸಂಬಂಧಿಸಿದ ದಾಖಲೆ ತೋರಿಸುವಂತೆ ಒತ್ತಾಯ ಹೇರದೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಣೆ ಮುಂದುವರಿಸಬೇಕು. ಈ ಪ್ರಕ್ರಿಯೆಯಲ್ಲಿ ಲೈಂಗಿಕ ಕಾರ್ಯಕರ್ತರ ಹೆಸರನ್ನು ಗೌಪ್ಯವಾಗಿ ಇಡಬೇಕು ಎಂದ ನ್ಯಾಯಾಲಯ.
Supreme Court of India
Supreme Court of India

ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಮತ್ತು ಗುರುತಿನ ಚೀಟಿ ನೀಡುವ ಸಂಬಂಧ ದಶಕಗಳ ಹಿಂದೆ ತಾನು ನೀಡಿರುವ ನಿರ್ದೇಶನವನ್ನು ಪಾಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದರೂ ಏಕೆ ಪಾಲಿಸಲಾಗುತ್ತಿಲ್ಲ. ಇದಕ್ಕೆ ಕಾರಣ ತಿಳಿಯದಾಗಿದೆ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೇಶಾದ್ಯಂತ ಲೈಂಗಿಕ ಕಾರ್ಯಕರ್ತರಿಗೆ ಪುನರ್ವಸತಿ ಮತ್ತು ಅವರ ಹಕ್ಕುಗಳಿಗೆ ಸಂಬಂಧಿಸಿದಂತೆ 2011ರಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಬಿ ಆರ್‌ ಗವಾಯಿ ಮತ್ತು ಬಿ ವಿ ನಾಗರತ್ನ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

“ದೇಶದ ನಾಗರಿಕರಿಗೆ ಮೂಲಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (ನ್ಯಾಕೊ) ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಮತ್ತು ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ತಕ್ಷಣ ಆರಂಭಿಸಬೇಕು” ಎಂದು ಪೀಠ ಆದೇಶಿಸಿದೆ.

“ಲೈಂಗಿಕ ಕಾರ್ಯಕರ್ತರಿಗೆ ಪಡಿತರ, ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ಗಳನ್ನು ನೀಡಿರುವುದಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿಯನ್ನು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪೀಠ ಆದೇಶ ಮಾಡಿದೆ. “ಘನತೆಯ ಹಕ್ಕು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಇದು ದೇಶದ ಎಲ್ಲಾ ನಾಗರಿಕರಿಗೂ ಅನ್ವಯಿಸುತ್ತದೆ” ಎಂದು ಪೀಠ ಹೇಳಿದೆ.

ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲವು ತಿಂಗಳವರೆಗೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಿಸಲಾಗಿತ್ತು. ಬಳಿಕ ಅದನ್ನು ನಿಲ್ಲಿಸಲಾಗಿದೆ ಎಂದು ಅಮಿಕಸ್‌ ಕ್ಯೂರಿ ಮತ್ತು ಹಿರಿಯ ವಕೀಲ ಜಯಂತ್‌ ಭೂಷಣ್‌ ಅವರು ಪೀಠದ ಗಮನಸೆಳೆದರು.

Also Read
ಭಿನ್ನ ಲೈಂಗಿಕ ಮನೋಧರ್ಮ ಹೊಂದಿದ್ದಕ್ಕೆ ಬೆದರಿಕೆಗೆ ಒಳಗಾದ ಪ್ರಜೆಗಳ ಹಕ್ಕುಗಳ ನಿಗಾಕ್ಕೆ ಬದ್ಧ: ಅಲಾಹಾಬಾದ್ ಹೈಕೋರ್ಟ್

ಆಗ ನ್ಯಾಯಾಲಯವು “ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಮತ್ತು ಗುರುತಿನ ಚೀಟಿ ನೀಡುವಂತೆ ದಶಕಗಳ ಹಿಂದೆಯೇ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ. ಆದರೂ, ಈ ನಿರ್ದೇಶನವನ್ನು ಇದುವರೆಗೂ ಏಕೆ ಜಾರಿಗೊಳಿಸಲಾಗಿಲ್ಲ ಎಂಬುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ” ಎಂದು ಬೇಸರಿಸಿತು.

ಪಡಿತರ ಚೀಟಿ, ವಸತಿ ವಿಳಾಸ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆ ತೋರಿಸುವಂತೆ ಒತ್ತಾಯ ಹೇರದೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಣೆ ಮುಂದುವರಿಸಬೇಕು. ಈ ಪ್ರಕ್ರಿಯೆಯಲ್ಲಿ ಲೈಂಗಿಕ ಕಾರ್ಯಕರ್ತರ ಹೆಸರನ್ನು ಗೌಪ್ಯವಾಗಿ ಇಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com