ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ಬಳಿಯ ನಯೀ ಬಸ್ತಿಯಲ್ಲಿ ನಡೆಯುತ್ತಿರುವ ಕಟ್ಟಡ ತೆರವು ಕಾರ್ಯಾಚರಣೆಯನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಬುಧವಾರ ಭಾರತೀಯ ರೈಲ್ವೆಗೆ ತಡೆಯಾಜ್ಞೆ ನೀಡಿದೆ.
ಈ ಪ್ರದೇಶದಲ್ಲಿ 1880ರಿಂದ ನೆಲೆಸಿರುವವರ ಮನೆಗಳನ್ನು ಕೆಡವಲಾಗುತ್ತಿದೆ ಎಂದು ಆರೋಪಿಸಿ 66 ವರ್ಷದ ನಿವಾಸಿ ಯಾಕೂಬ್ ಷಾ ಅವರು ಸಲ್ಲಿಸಿದ್ದ ತುರ್ತು ಅರ್ಜಿ ಆಲಿಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ರೈಲ್ವೆ ತೆರವು ಕಾರ್ಯಾಚರಣೆ 2023ರ ಆಗಸ್ಟ್ 9ರಂದು (ಕಳೆದ ವಾರ) ಆರಂಭವಾಗಿದ್ದು ಮರುದಿನ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸಿವಿಲ್ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಲಾಯಿತು. ಆದರೆ, ರೈಲ್ವೆ ಪರ ವಕೀಲರು ಈ ಕುರಿತು ತನಗೆ ರೈಲ್ವೆ ಇಲಾಖೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿದ ಬಳಿಕ ಪ್ರಕರಣವನ್ನು ಮುಂದೂಡಲಾಯಿತು ಎಂದು ಷಾ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸಿವಿಲ್ ನ್ಯಾಯಾಲಯ ಆಗಸ್ಟ್ 14ರಂದು ಪ್ರಕರಣದ ವಿಚಾರಣೆ ನಡೆಸಲು ಸಿದ್ಧವಾಗಿತ್ತಾದರೂ ವಕೀಲರೊಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಾಗಿ ನ್ಯಾಯವಾದಿಗಳು ಕೆಲಸ ಮಾಡದಂತೆ ವಕೀಲರ ಪರಿಷತ್ ನಿರ್ಣಯ ಕೈಗೊಂಡಿದ್ದರಿಂದ ಮಥುರಾದ ಸಿವಿಲ್ ನ್ಯಾಯಾಲಯ ಮತ್ತು ಅಲಾಹಾಬಾದ್ ಹೈಕೋರ್ಟ್ ಬಂದ್ ಆಗಿದ್ದವು ಎಂದು ಅರ್ಜಿಯಲ್ಲಿ ಷಾ ವಿವರಿಸಿದ್ದಾರೆ.
ಪರಿಸ್ಥಿತಿಯ ಲಾಭ ಪಡೆದ ರೈಲ್ವೆ ಮತ್ತು ಆಗಸ್ಟ್ 14ರಂದು ಕಟ್ಟಡ ನೆಲಸಮ ಕಾರ್ಯಾಚರಣೆ ಪುನರಾರಂಭಿಸಿತು. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದನ್ನು ಬಿಟ್ಟು ಬೇರೆ ದಾರಿ ಉಳಿದಿರಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹತ್ತು ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಇಂದು ಆದೇಶ ನೀಡಿದ್ದು ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯಲಿದೆ.