ವೈದ್ಯಕೀಯ ಶುಷ್ರೂಷೆಗಾಗಿ ಸಿದ್ದಿಕಿ ಕಪ್ಪನ್‌ರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್
ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ದೃಷ್ಟಿಯಿಂದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸುವಂತೆ ಬುಧವಾರ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.
ಕಪ್ಪನ್ ಅವರ ಮೇಲೆ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದೂರು ದಾಖಲಿಸಲಾಗಿದ್ದು, ಸದ್ಯ ಅವರು ಮಥುರಾ ಜೈಲಿನಲ್ಲಿದ್ದಾರೆ.
“ಸಿದ್ದಿಕಿ ಕಪ್ಪನ್ ಅವರನ್ನು ದೆಹಲಿಯಲ್ಲಿರುವ ಆರ್‌ಎಂಎಲ್, ಏಮ್ಸ್ ಅಥವಾ ಇನ್ನಾವುದೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ನಾವು ನಿರ್ದೇಶಿಸುತ್ತೇವೆ. ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಅವರನ್ನು ಮಥುರಾ ಜೈಲಿಗೆ ಮರಳಿ ಕಳುಹಿಸಬಹುದು” ಎಂದು ನ್ಯಾಯಾಲಯವು ಮನವಿಯನ್ನು ವಿಲೇವಾರಿ ಮಾಡಿದೆ. ಅಲ್ಲದೇ, ಕಪ್ಪನ್ ಅವರು ಜಾಮೀನಿಗಾಗಿ ಅಧೀನ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠವು ತಿಳಿಸಿದೆ.
ಸಿದ್ದಿಕಿ ಕಪ್ಪನ್ ಅವರನ್ನು ಮಥುರಾದ ಆಸ್ಪತ್ರೆಯ ಮಂಚವೊಂದಕ್ಕೆ ಪ್ರಾಣಿಯಂತೆ ಕಟ್ಟಿಹಾಕಲಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರಿಗೆ ಬರೆದ ಪತ್ರದಲ್ಲಿ ಕಪ್ಪನ್ ಪತ್ನಿ ರೈಹಾಂತ್ ತಿಳಿಸಿದ್ದರು.
ಕಪ್ಪನ್ ಅವರನ್ನು ತುರ್ತು ಚಿಕಿತ್ಸೆಗಾಗಿ ಉತ್ತರ ಪ್ರದೇಶದಿಂದ ಏಮ್ಸ್‌ಗೆ ವರ್ಗಾಯಿಸುವಂತೆ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲುಜೆ) ಮನವಿ ಸಲ್ಲಿಸಿತ್ತು.