ಕೋವಿಡ್ ಪರಿಸ್ಥಿತಿ ಎದುರಿಸಲು ದೆಹಲಿಗೆ ನಿತ್ಯ 700 ಮೆ.ಟನ್ ಆಮ್ಲಜನಕ ಸರಬರಾಜು ಮಾಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಖಡಾಖಂಡಿತವಾಗಿ ಹೇಳಿದೆ. ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಯವರೆಗೆ 86 ಮೆ.ಟನ್ ಆಮ್ಲಜನಕ ದೊರೆತಿದೆ ಮತ್ತು ನಿತ್ಯ 16 ಮೆ ಟನ್ ಅನಿಲ ರವಾನಿಸಲಾಗುತ್ತಿದೆ ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ಪ್ರಸ್ತಾಪಿಸಿದ ನಂತರ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಈ ಹೇಳಿಕೆ ನೀಡಿದೆ.
“ಪ್ರತಿದಿನ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ದೆಹಲಿಗೆ ಪೂರೈಕೆ ಮಾಡಬೇಕೆಂದು ನಾವು ಬಯಸುತ್ತೇವೆ. ಈ ಬಗ್ಗೆ ಗಂಭೀರ ನಿಲುವು ತಳೆದಿದ್ದೇವೆ. ಅದನ್ನು ಸರಬರಾಜು ಮಾಡಲೇಬೇಕು. ಬಲವಂತದ ಕ್ರಮ ಕೈಗೊಳ್ಳಲು ನಮಗೆ ಇಷ್ಟಇಲ್ಲ. ನಮ್ಮ ಆದೇಶ ಸುಪ್ರೀಂಕೋರ್ಟ್ ಜಾಲತಾಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಅಪ್ಲೋಡ್ ಆಗುತ್ತದೆ. ನೀವು ಮುಂದುವರೆದು ಆಮ್ಲಜನಕ ಪೂರೈಸಿ” ಎಂದು ಪೀಠ ತಿಳಿಸಿತು.
ಮುಂದಿನ ಆದೇಶ ನೀಡುವವರೆಗೆ ನಿತ್ಯ 700 ಮೆ.ಟನ್ ಆಮ್ಲಜನಕವನ್ನು ಪೂರೈಸಬೇಕು ಎಂದು ನ್ಯಾಯಾಲಯ ಖಡಾಖಂಡಿತವಾಗಿ ಹೇಳಿತು. ಅಲ್ಲದೆ ಕಠಿಣ ನಿಲುವು ತಳೆಯುವಂತೆ ಮಾಡಬೇಡಿ ಎಂದು ಕೂಡ ಎಚ್ಚರಿಸಿತು.
ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಆದೇಶಗಳನ್ನು ಪಾಲಿಸದೇ ಇರುವುದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಶೋ ಕಾಸ್ ನೋಟಿಸ್‌ಗೆ ಬುಧವಾರ ತಡೆ ನೀಡಿದ್ದ ಸುಪ್ರೀಂಕೋರ್ಟ್ 700 ಮೆಟ್ರಿಕ್ ಟನ್ ಆಮ್ಲಜನಕದ ಗುರಿಯನ್ನು ಹೇಗೆ ಸಾಧಿಸಲಾಗುತ್ತದೆ ಎನ್ನುವ ಕುರಿತು ಯೋಜನೆಯೊಂದನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.