ಆಸಿಡ್ ದಾಳಿಯಿಂದ ಕಣ್ಣಿಗೆ ಹಾನಿಯಾಗಿರುವ ಸಂತ್ರಸ್ತೆಯರಿಗೆ ಪರ್ಯಾಯ ಡಿಜಿಟಲ್ ಕೆವೈಸಿ ಅಥವಾ ಇ-ಕೆವೈಸಿ (ಗ್ರಾಹಕರನ್ನು ಬ್ಯಾಂಕ್‌ಗಳು ಅರಿಯುವ ವಿಧಾನ) ಪ್ರಕ್ರಿಯೆ ಜಾರಿಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯಲ್ಲಿ ಮಹತ್ವದ ಅಂಶಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಜುಲೈಗೆ ವಿಚಾರಣೆ ಮುಂದೂಡಿದೆ.
“ಆಸಿಡ್ ದಾಳಿ ಸಂತ್ರಸ್ತೆಯರಿಗೆ ಕೆವೈಸಿ ಅಗತ್ಯವಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗುತ್ತಿದೆ. ಇದು ಮಹತ್ವದ ವಿಚಾರವಾಗಿದ್ದು, ನಾವು ವಾದ ಆಲಿಸಲಿದ್ದೇವೆ” ಎಂದು ಸಿಜೆಐ ಹೇಳಿದರು.
ಆಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಅರ್ಜಿದಾರೆಯೊಬ್ಬರು 2023ರಲ್ಲಿ ಐಸಿಐಸಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಹೋಗಿದ್ದರು. ಆದರೆ, ಡಿಜಿಟಲ್ ಕೆವೈಎಸ್/ಇ-ಕೆವೈಸಿ ಪೂರ್ಣಗೊಳಿಸುವಾಗ ಆಕೆಯ ಲೈವ್ ಫೋಟೊ ತೆಗೆಯಲು ಸಾಧ್ಯವಾಗದಿದ್ದರಿಂದ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.
ಅರ್ಜಿಯ ಪ್ರಕಾರ ಗ್ರಾಹಕರು ಕ್ಯಾಮೆರಾದ ಮುಂದೆ ಕಡ್ಡಾಯವಾಗಿ ಕಣ್ಣು ಮಿಟುಕಿಸಿದರೆ ಮಾತ್ರ ಆರ್‌ಬಿಐ ನಿರ್ದೇಶನದ ಪ್ರಕಾರ ಕೆವೈಸಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಭಾರಿ ಚರ್ಚೆ ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಬ್ಯಾಂಕ್ ಅರ್ಜಿದಾರೆಗೆ ವಿನಾಯಿತಿ ಕಲ್ಪಿಸಿತ್ತು.
ಇಂಥದ್ದೇ ಸಮಸ್ಯೆಯನ್ನು ಹಲವು ಸಂತ್ರಸ್ತೆಯರು ಅನುಭವಿಸುತ್ತಿದ್ದು, ಹೊಸದಾಗಿ ಡಿಜಿಟಲ್ ಕೆವೈಸಿ/ಇ-ಕೆವೈಸಿ ಪ್ರಕ್ರಿಯೆ ನಡೆಸಲು ಪರ್ಯಾಯ ವಿಧಾನ ಸೂಚಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
ಡಿಜಿಟಲ್ ಕೆವೈಸಿ ನಡೆಸುವ ಎಲ್ಲರಿಗೂ ಪರಿಣಾಮಕಾರಿ ಮಾರ್ಗಸೂಚಿ ಅನುಸರಿಸುವ ಸಂಬಂಧ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.