ಹೈಕೋರ್ಟ್ ತೀರ್ಪಿನ ಬಳಿಕ ಅನರ್ಹಗೊಂಡಿದ್ದ ಹಿಮಾಚಲ ಪ್ರದೇಶದ 6 ಕಾಂಗ್ರೆಸ್ ಶಾಸಕರಿಗೆ ಸುಪ್ರೀಂ ರಕ್ಷಣೆ

ಹಿಮಾಚಲ ಪ್ರದೇಶ ಸಂಸದೀಯ ಕಾರ್ಯದರ್ಶಿಗಳ (ನೇಮಕಾತಿ, ಸಂಬಳಗಳು, ಭತ್ಯೆಗಳು, ಅಧಿಕಾರಗಳು, ಸವಲತ್ತುಗಳು ಮತ್ತು ಸೌಕರ್ಯಗಳು) ಕಾಯಿದೆ, 2006ನ್ನು ಅಲ್ಲಿನ ಹೈಕೋರ್ಟ್ ಈಚೆಗೆ ರದ್ದುಗೊಳಿಸಿತ್ತು.
Supreme Court and Himachal Pradesh Map
Supreme Court and Himachal Pradesh Map
Published on

ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯ ವಿಧಾನಸಭೆಯಿಂದ ಅನರ್ಹಗೊಂಡಿದ್ದ ಆರು ಕಾಂಗ್ರೆಸ್‌ ಶಾಸಕರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಮಧ್ಯಂತರ ಪರಿಹಾರ ನೀಡಿದೆ [ಹಿಮಾಚಲ ಪ್ರದೇಶ ಮತ್ತು ಕಲ್ಪನಾದೇವಿ ಇನ್ನಿತರರ ನಡುವಣ ಪ್ರಕರಣ].

ರಾಜ್ಯದಿಂದ ಮುಖ್ಯ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ ಆರು ಶಾಸಕರಿಗೆ ಅನರ್ಹತೆಯ ವಿರುದ್ಧ ನೀಡಲಾದ ರಕ್ಷಣೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸಿಜೆಐ ಸಂಜೀವ್‌ ಖನ್ನಾ ನ್ಯಾಯಮೂರ್ತಿ ಪಿ ವಿ ಸಂಜಯ್‌ ಕುಮಾರ್‌ ಅವರಿದ್ದ ಪೀಠ ರದ್ದುಗೊಳಿಸಿತು.

Also Read
ಅಡ್ಡ ಮತದಾನದಿಂದ ಸೋಲು: ಹಿಮಾಚಲ ಪ್ರದೇಶದ 6 ಅನರ್ಹ ಕಾಂಗ್ರೆಸ್ ಶಾಸಕರ ವಿರುದ್ಧ ಸುಪ್ರೀಂನಲ್ಲಿ ವಕೀಲ ಸಿಂಘ್ವಿ ಸೆಣಸಾಟ

ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಲು ಅನುಮತಿ ನೀಡಿದ 2006ರ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಹಿಮಾಚಲ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಶಾಸಕರು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿ 'ಲಾಭದಾಯಕ ಹುದ್ದೆ' ಹೊಂದುವುದನ್ನು ಕಾಯಿದೆ ನಿರ್ಬಂಧಿಸಲಿದ್ದು ಅವರು ಮತ್ತೊಂದು ಹುದ್ದೆ ಹೊಂದಿದ್ದರೆ ಅನರ್ಹಗೊಳ್ಳುತ್ತಾರೆ ಎಂದು ಹೇಳುತ್ತದೆ. ಆದರೆ ಹಿಮಾಚಲ ಪ್ರದೇಶದ ಶಾಸಕರು ಮುಖ್ಯ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಾಗ ಹಿಮಾಚಲ ಪ್ರದೇಶ ವಿಧಾನಸಭಾ ಸದಸ್ಯರ (ಅನರ್ಹತೆ ತೆರವು) ಕಾಯಿದೆ-  1971ರ ಅಡಿ ಅವರಿಗೆ ರಕ್ಷಣೆ ದೊರೆತಿತ್ತು.

ಆರು ಕಾಂಗ್ರೆಸ್ ಶಾಸಕರ ಮುಖ್ಯ ಸಂಸದೀಯ ಕಾರ್ಯದರ್ಶಿಗಳ  ಹುದ್ದೆ ರದ್ದುಗೊಳಿಸಿದ್ದ ಹೈಕೋರ್ಟ್‌ ವಿಧಾನಸಭೆಯ ಸದಸ್ಯರಿಗೆ (ಎಂಎಲ್‌ಎ) ನೀಡಲಾದ ರಕ್ಷಣೆಯನ್ನು ಕಾನೂನುಬಾಹಿರ ಎಂದು ಹೇಳಿತ್ತು.

ಕಾನೂನು ಪ್ರಕಾರ ಸ್ವಾಭಾವಿಕ ಪರಿಣಾಮ ಮತ್ತು ಕಾನೂನು ಪರಿಣಾಮಗಳನ್ನು ತಕ್ಷಣವೇ ಪಾಲಿಸಬೇಕು ಎಂದು ಅದು ಹೇಳಿತ್ತು. ಇದರಂತೆ ಶಾಸಕರು ರಾಜ್ಯ ವಿಧಾನಸಭೆಯಿಂದ ಅನರ್ಹತೆ ಎದುರಿಸಬೇಕಾಗಿತ್ತು.

ಆದರೆ, ಹೈಕೋರ್ಟ್‌ನ ಈ ಆದೇಶವನ್ನು ವಕೀಲೆ ಸುಗಂಧಾ ಆನಂದ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಪ್ರಶ್ನಿಸಿತ್ತು.  ಹಿಮಾಚಲ ಪ್ರದೇಶ ಸಂಸದೀಯ ಕಾರ್ಯದರ್ಶಿಗಳ (ನೇಮಕಾತಿ, ಸಂಬಳಗಳು, ಭತ್ಯೆಗಳು, ಅಧಿಕಾರಗಳು, ಸವಲತ್ತುಗಳು ಮತ್ತು ಸೌಕರ್ಯಗಳು) ಕಾಯಿದೆ, 2006ನ್ನು  ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಲು ಕಾಯಿದೆ ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಟ್ಟಿತ್ತು.

Also Read
ಶಾಸಕರ ರಾಜೀನಾಮೆ ನಿರ್ಧರಿಸುವ ಕುರಿತು ಸ್ಪೀಕರ್‌ಗೆ ನ್ಯಾಯಾಲಯ ಗಡುವು ವಿಧಿಸಲಾಗದು: ಹಿಮಾಚಲ ಪ್ರದೇಶ ಹೈಕೋರ್ಟ್

ಆರು ಶಾಸಕರ ಮುಖ್ಯ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಗೊಳಿಸುವ ವೇಳೆ ಹೈಕೋರ್ಟ್‌ ತನ್ನ ಆದೇಶದಲ್ಲಿ ಸಂಪುಟ  ಗಾತ್ರದ ಮೇಲೆ ನಿರ್ಬಂಧ ವಿಧಿಸುವ 164 (1-ಎ) ವಿಧಿಯ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಸಂಸದೀಯ ಕಾರ್ಯದರ್ಶಿಗಳು "ಕ್ಯಾಬಿನೆಟ್ ಸಚಿವರ ಕಚೇರಿಗೆ ಪೂರಕ/ಪ್ರಾಸಂಗಿಕ" ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಬಿಜೆಪಿ ಪರವಾಗಿ ಹಿರಿಯ ವಕೀಲರಾದ ಮಣಿಂದರ್ ಸಿಂಗ್ , ಮುಕುಲ್ ರೋಹಟಗಿ,  ಅಂಕುಶ್ ದಾಸ್ ಸೂದ್ ಹಾಗೂ ಅವರ ತಂಡ; ಹಿಮಾಚಲ ಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ,  ಹೆಚ್ಚುವರಿ ಅಡ್ವೊಕೇಟ್ ಜನರಲ್ ನವಲೇಶ್ ವರ್ಮಾ ಇನ್ನಿತರರು ವಾದ ಮಂಡಿಸಿದ್ದರು.

Kannada Bar & Bench
kannada.barandbench.com