ಎನ್‌ಸಿಎಲ್‌ಟಿ ಆದೇಶಗಳಲ್ಲಿ ಪದೇ ಪದೇ ಹಸ್ತಕ್ಷೇಪ: ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ತರಾಟೆ

ಆಕಾಶ್ ಇನ್‌ಸ್ಟಿಟ್ಯೂಟ್‌ನ ಷೇರುದಾರಿಕೆಗೆ ಸಂಬಂಧಿಸಿದ ಎನ್‌ಸಿಎಲ್‌ಟಿ ಆದೇಶದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಸಮರ್ಥನೀಯವಲ್ಲ ಎಂದ ಪೀಠ ಬೈಜೂಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ತಿರಸ್ಕರಿಸಿತು.
Supreme Court and Karnataka High Court
Supreme Court and Karnataka High Court
Published on

ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶಗಳಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿರುವ ಕರ್ನಾಟಕ ಹೈಕೋರ್ಟ್ ನಡೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಟೀಕಿಸಿದೆ.

ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (ಆಕಾಶ್ ಇನ್ಸ್ಟಿಟ್ಯೂಟ್) ನ ಷೇರುದಾರರಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎನ್‌ಸಿಎಲ್‌ಟಿ ನೀಡಿದ್ದ ನಿರ್ದೇಶನವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೈಜೂಸ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ಈ ಅವಲೋಕನ ವ್ಯಕ್ತವಾಗಿದೆ.

Also Read
ಇಮೇಲ್‌ ಸಂವಹನ ಸುರಕ್ಷಿತವಾಗಿ ಕಾಪಾಡಲು ಬೈಜೂಸ್‌ ಆರ್‌ಪಿ ಶೈಲೇಂದ್ರಗೆ ಹೈಕೋರ್ಟ್‌ ನಿರ್ದೇಶನ

ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು  ಬಯಸದ  ಕಾರಣ ಬೈಜೂಸ್‌ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿತು. ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯನ್ನು ಹಿಂಪಡೆದ ಕಾರಣ ಅದನ್ನು ವಜಾಗೊಳಸಿತು.

" ನಾವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ವಿಶೇಷ ಅನುಮತಿ ಅರ್ಜಿಯನ್ನು ಹಿಂಪಡೆಯಲು ಸೂಚಿಸಿ ವಜಾಗೊಳಿಸಲಾಗಿದೆ. ಆದರೆ, ಎನ್‌ಸಿಎಲ್‌ಟಿ ಆದೇಶದಲ್ಲಿ ಕರ್ನಾಟಕ ಹೈಕೋರ್ಟ್ ಹಸ್ತಕ್ಷೇಪ ಮಾಡಲು ಯಾವುದೇ ಸಮರ್ಥನೆ ಇಲ್ಲ" ಎಂದು ನ್ಯಾಯಾಲಯ ಹೇಳಿತು.

ಕರ್ನಾಟಕ ಹೈಕೋರ್ಟ್‌ ಈ ಹಿಂದೆಯೂ ಇದೇ ರೀತಿ ಹಸ್ತಕ್ಷೇಪ ಮಾಡಿರುವುದನ್ನು ನಂತರ ಅವುಗಳನ್ನು ತಾನು ರದ್ದುಪಡಿಸಿರುವುದನ್ನು ಅದು ತಿಳಿಸಿತು. 

ಆಕಾಶ್ ಇನ್‌ಸ್ಟಿಟ್ಯೂಟ್‌ನ ಷೇರುದಾರಿಕೆಗೆ ಸಂಬಂಧಿಸಿದ ಎನ್‌ಸಿಎಲ್‌ಟಿ ಆದೇಶದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡುವುದು ಸಮರ್ಥನೀಯವಲ್ಲ ಎಂದ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಬೈಜೂಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ತಿರಸ್ಕರಿಸಿತು.

ಥಿಂಕ್ & ಲರ್ನ್ (ಬೈಜೂಸ್) ಸಂಸ್ಥೆಯನ್ನು ಹಿರಿಯ ವಕೀಲ ಪರಮ್‌ಜಿತ್ ಪಟ್ವಾಲಿಯಾ ಪ್ರತಿನಿಧಿಸಿದ್ದರು. ಪ್ರತಿವಾದಿಗಳ ಪರ ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯಂ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

Also Read
ಬಿಸಿಸಿಐ ಜೊತೆಗಿನ ಬೈಜೂಸ್‌ ಒಪ್ಪಂದ ಒಪ್ಪಿದ ಎನ್‌ಸಿಎಲ್‌ಎಟಿ, ದಿವಾಳಿ ಪ್ರಕ್ರಿಯೆ ಸ್ಥಗಿತ

ಪ್ರಸ್ತುತ ಮಣಿಪಾಲ್ ಸಿಸ್ಟಮ್ಸ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಆಕಾಶ್ ಇನ್‌ಸ್ಟಿಟ್ಯೂಟ್‌ನ ಷೇರುದಾರರ ಸುತ್ತ ಇರುವ ದೀರ್ಘಕಾಲದ ಕಾರ್ಪೊರೇಟ್  ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದರಲ್ಲಿ ಬೈಜೂಸ್‌ (ಥಿಂಕ್ & ಲರ್ನ್) ಮತ್ತು ಸಿಂಗಪೋರ್‌ ಟೋಪ್ಕೊ (ಬ್ಲಾಕ್‌ಸ್ಟೋನ್ ಬೆಂಬಲಿತ ಘಟಕ) ಗಮನಾರ್ಹ ಪಾಲನ್ನು ಹೊಂದಿವೆ.

ಆಕಾಶ್‌ನ ಇನ್‌ಸ್ಟಿಟ್ಯೂಟ್‌ನ ಸಂಘದ ನಿಯಮಾವಳಿಗೆ ತಿದ್ದುಪಡಿ ಮಾಡಿದರೆ ತನ್ನ ಷೇರುಗಳು ಕಡಿಮೆಯಾಗುತ್ತವೆ ಎಂದು ಬೈಜೂಸ್‌ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅದರ ಷೇರನ್ನು ದುರ್ಬಲಗೊಳಿಸುವುದನ್ನು ತಡೆಯಲು ಎನ್‌ಸಿಎಲ್‌ಟಿ ಮಾರ್ಚ್ 27 ರಂದು ಆಕಾಶ್‌ನ ಷೇರುದಾರರ ಮಾದರಿಯ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.

ನಂತರ, ಆಕಾಶ್‌ ವಿಚಾರಣೆಗೆ ಅವಕಾಶ ನೀಡಿಲ್ಲ ಎಂದು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌, ಈ ಹಿಂದೆ ಎನ್‌ಸಿಎಲ್‌ಟಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು.

ಪ್ರಕರಣವನ್ನು ಎನ್‌ಸಿಎಲ್‌ಟಿಗೆ ಮರಳಿಸಿದ್ದ ನ್ಯಾ. ನಾಗಪ್ರಸನ್ನ ನೇತೃತ್ವದ ಪೀಠವು ಹೊಸದಾಗಿ ಪ್ರಕರಣ ಪರಿಗಣಿಸುವಂತೆ ಸೂಚಿಸಿತ್ತು. ಇದೇ ವೇಳೆ ಏ.30ರ ವರೆಗೆ ಬೈಜೂಸ್‌ನ ಪಾಲುದಾರಿಕೆಯನ್ನು ಕಡಿಮೆ ಮಾಡುವುದಿಲ್ಲ ಎನ್ನುವ ಮುಚ್ಚಳಿಕೆಯನ್ನು ಸಹ ಆಕಾಶ್‌ನಿಂದ ಪಡೆದಿತ್ತು.

Kannada Bar & Bench
kannada.barandbench.com